ADVERTISEMENT

ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿ

ಸಭೆಯಲ್ಲಿ ಕಾರ್ಯದರ್ಶಿ ನಾಗಾಂಬಿಕಾದೇವಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 11:25 IST
Last Updated 4 ಜೂನ್ 2018, 11:25 IST

ಚಿಕ್ಕಬಳ್ಳಾಪುರ: ‘ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಭವಿಸಬಹುದಾದ ಹಾನಿಯನ್ನು ಎದುರಿಸಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ನಾಗಾಂಬಿಕಾ ದೇವಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಯಿಂದಾಗಬಹುದಾದ ಹಾನಿ ಎದುರಿಸಲು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಹ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಸಂದರ್ಭ ಒದಗಿ ಬಂದಲ್ಲಿ ರಕ್ಷಣಾ ಕಾರ್ಯಕ್ಕೆ ಗಮನ ನೀಡಬೇಕು. ನೈಸರ್ಗಿಕ ವಿಪತ್ತಿನ ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳನ್ನು ರಚಿಸಲು ಮುಂಜಾಗ್ರತೆ ವಹಿಸಬೇಕು ಎಂದು ‌ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

ಭಾರಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಜೀವಹಾನಿ ಸೇರಿದಂತೆ ಆಸ್ತಿ ಪಾಸ್ತಿಗಳಿಗೆ ನಷ್ಟದ ಬಗ್ಗೆ ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ, ನೈಸರ್ಗಿಕ ವಿಪತ್ತಿನ ಪರಿಸ್ಥಿತಿ ನಿಭಾಯಿಸುವ ಜತೆಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಹಶೀಲ್ದಾರರು ತಾಲ್ಲೂಕುಗಳಲ್ಲಿ ತುರ್ತು ನೆರವು ನೀಡುವ ನಿಯಂತ್ರಣ ಕೊಠಡಿ ಸ್ಥಾಪಿಸಿ, ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು.

ಮುಂಗಾರು ಮಳೆ ಅವಧಿ ಮುಕ್ತಾಯದವರೆಗೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಯಾವುದೇ ರಜೆ ಮಂಜೂರು ಮಾಡುವಂತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ)  ದಿನವೂ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಗೆ ಮಳೆ ಹಾಗೂ ನೈಸರ್ಗಿಕ ವಿಪತ್ತುಗಳ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.

‘ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂಗಾರು ಮಳೆಯ ಅವಧಿ ಮುಗಿಯುವವರೆಗೆ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು. ನೀರನ್ನು ಕಾಯಿಸಿ ಶೋಧಿಸಿ ಕುಡಿಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮುಂಗಾರು ಮಳೆ ಮುಕ್ತಾಯದವರೆಗೆ ಹೆಚ್ಚಿನ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ಜಿಲ್ಲೆಯ ಪ್ರತಿ ಹಳ್ಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಡಿಲು -ಮಿಂಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇತ್ತೀಚಿಗೆ ಬಾಗೇಪಲ್ಲಿ ತಾಲ್ಲೂಕಿನ ಸಿಡಿಲಿನಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು’ ಎಂದು ಉಪವಿಭಾಗಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯ ರೈತರ ಜಮೀನಿನಲ್ಲಿ ಬೋರ್‌ವೆಲ್‌ ಕೊರೆದ ಕೊಳವೆ ಮುಚ್ಚಬೇಕು ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಸ್ಪಿ ಕಾರ್ತಿಕ್‌ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್. ಅನುರಾಧಾ, ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ, ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.