ADVERTISEMENT

`ಪ್ರಜೆಗಳು ಪ್ರಭುಗಳು, ಅಧಿಕಾರಿಗಳು ಸೇವಕರು'

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 8:25 IST
Last Updated 4 ಜೂನ್ 2013, 8:25 IST

ಚಿಂತಾಮಣಿ: ಸಂವಿಧಾನದ ಆಶಯದಂತೆ ಪ್ರಜೆಗಳ ಸೇವಕರಾಗಬೇಕಿದ್ದ ರಾಜಕಾರಣಿಗಳು, ಅಧಿಕಾರಿಗಳು ಪ್ರಭುಗಳಾಗಿ ಮೆರೆಯುತ್ತಿದ್ದಾರೆ ಎಂದು ವಕೀಲ ಶ್ರೀನಾಥ್ ವಿಷಾದಿಸಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ವಕೀಲರ ಸಂಘದಿಂದ ಸುಪ್ರೀಂ ಕೋರ್ಟ್  ನ್ಯಾಯಮೂರ್ತಿ ವಿ.ಗೋಪಾಲಗೌಡರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಸಂವಿಧಾನದ ನೀತಿಯಂತೆ ಪ್ರಜೆಗಳು ಪ್ರಭುಗಳಾಗಬೇಕು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಅವರ ಸೇವಕರಾಗಿ ಕೆಲಸ ಮಾಡಬೇಕು.

ಈಚೆಗೆ ಇದು ತದ್ವಿರುದ್ಧವಾಗಿದೆ. ನ್ಯಾಯಾಲಯಗಳು ಕ್ರಿಯಾಶೀಲವಾಗಿದ್ದು, ಸಂವಿಧಾನದ ಘನತೆ ಗೌರವಎತ್ತಿ ಹಿಡಿಯುವಂಥ ಕೆಲಸ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಮೂರ್ತಿ ವಿ.ಗೋಪಾಲಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂವಿಧಾನದ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ತರವಾದುದು. ವಕೀಲರ ಸಂಘಗಳಿಂದ ತರಬೇತಿ ಶಿಬಿರಗಳು, ವಿಚಾರ ವಿನಿಮಯ ಸಭೆಗಳನ್ನು ಏರ್ಪಡಿಸುವುದರಿಂದ ಕಕ್ಷಿದಾರರಿಗೆ ಅನುಕೂಲವಾಗುತ್ತದೆ ಎಂದರು.

ಹಿರಿಯ ವಕೀಲರಾದ ವಿಶ್ವನಾಥಶೆಟ್ಟಿ, ವೆಂಕಟರಾಯಪ್ಪ, ಪಾಪಿರೆಡ್ಡಿ, ಪ್ರಸಾದ್ ವೇದಿಕೆಯಲ್ಲಿದ್ದರು. ನಗರದ ನ್ಯಾಯಾಲಯಗಳ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಿರಿಯ ವಕೀಲ ಬೈರಾರೆಡ್ಡಿ ಸ್ವಾಗತಿಸಿದರು. ಇಬ್ರಾಹಿಂ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT