ಗುಡಿಬಂಡೆ: ಪ್ರತಿಯೊಬ್ಬರು ಸಂವಿಧಾನ ಮತ್ತು ಕಾನೂನು ಕುರಿತು ಅರಿವು ಹೊಂದಿರಬೇಕು. ಕಾನೂನು ಸಾಕ್ಷರರಾಗುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಸಲಹೆ ನೀಡಿದರು.
ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಸಾಕ್ಷರರಾದಲ್ಲಿ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಯಾವುದೇ ಅನ್ಯಾಯ ನಡೆಯದಂತೆ ತಡೆಗಟ್ಟಬಹುದು ಎಂದರು.
ಕಾನೂನು ಮತ್ತು ಸುವ್ಯವಸ್ಥೆ ಅಷ್ಟೇ ಅಲ್ಲ, ಬೇರೆ ಬೇರೆ ಕಾರಣಗಳಿಂದಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾನೂನಿನ ಕುರಿತು ಜಾಗೃತಿಯಿಲ್ಲದಿದ್ದರೆ ಆತಂಕ ಕಾಡುತ್ತದೆ ಎಂದು ಅವರು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಲಿಂಗಯ್ಯ, ಬಾಲ್ಯವಿವಾಹ ಕೇವಲ ಅಪರಾಧವಲ್ಲ; ಅದು ಸಾಮಾಜಿಕ ಪಿಡುಗು. ನಾಗರಿಕ ಸಮಾಜ ಇಂತಹವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣವೇ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ನೆರವಿನಿಂದ ವಿವಾಹ ತಡೆಯಬೇಕು. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದದ್ದು ಪೋಷಕರು ಮತ್ತು ಸಮಾಜದ ಕರ್ತವ್ಯ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ನಿಂದನಾ ತಡೆ ಕಾಯ್ದೆ ಕುರಿತು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಉಪನ್ಯಾಸ ನೀಡಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ.ರವಿಕುಮಾರ್, ವಕೀಲರಾದ ರಾಮನಾಥರೆಡ್ಡಿ, ಪಿ.ವಿ.ಲಕ್ಷ್ಮಿನಾರಾಯಣ, ಮೋಹನ್, ಶಿವಪ್ಪ, ನಂದೀಶ್‌ರೆಡ್ಡಿ, ಟಿ.ಸಿ.ಅಶ್ವತ್ಥರೆಡ್ಡಿ, ಗಂಗಾಧರಪ್ಪ, ನವೀನ್, ಜಿ.ವಿ.ವಿಶ್ವನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.