ADVERTISEMENT

ಬಾಗೇಪಲ್ಲಿ: ಅಪಾಯದ ಹಾದಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:30 IST
Last Updated 16 ಫೆಬ್ರುವರಿ 2011, 10:30 IST

ಬಾಗೇಪಲ್ಲಿ: ಒಂದಡೆ ಪ್ರಪಾತ, ಮತ್ತೊಂದಡೆ ಬತ್ತುತ್ತಿರುವ ಕೆರೆಯ ಸುತ್ತಮುತ್ತಲಿನ ಗಿಡಗಂಟಿಗಳ ತಾಣ. ವಾಹನ ಸ್ವಲ್ಪ ನಿಯಂತ್ರಣ ಕಳೆದುಕೊಂಡರೂ ಅಪಾಯಕ್ಕೀಡಾಗುವ ಆತಂಕ. ಪಟ್ಟಣದಿಂದ ಆಂಧ್ರಪ್ರದೇಶದ ಕೊಡಿಕೊಂಡಕ್ಕೆ ಹೋಗುವ ರಸ್ತೆ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ರಸ್ತೆಯ ಒಂದು ಬದಿಯಲ್ಲಿ ಬೃಹತ್ ಪ್ರಪಾತವಿದ್ದರೆ, ಮತ್ತೊಂದು ಬದಿಯಲ್ಲಿ ಬತ್ತುತ್ತಿರುವ ಕೆರೆಯಂಗಳದಲ್ಲಿ ಗಿಡಗಂಟಿ ಹಾಗೂ ಚರಂಡಿ ನೀರು ತುಂಬಿದೆ. ಪಟ್ಟಣದ ರಾಜಕಾಲುವೆಯಲ್ಲಿ ಹರಿಯುತ್ತಿರುವ ಚರಂಡಿ ನೀರು ಇದೇ ಕೊರ್ಲಕುಂಟೆ ಕೆರೆಗೆ ಬರುವುದರಿಂದ ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ.

ಪಟ್ಟಣದಿಂದ ಸುಮಾರು 4ರಿಂದ 5ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ಕೊಡಿಕೊಂಡ, ಚೆಕ್‌ಪೋಸ್ಟ್ ಗ್ರಾಮಗಳು ಇವೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ-7ರ ನಾರೇಪಲ್ಲಿ ಬಳಿ ಟೋಲ್ ಪ್ಲಾಜಾ ಆಗಿರುವುದರಿಂದ ಆಂಧ್ರಪ್ರದೇಶದ ಕಡೆಯಿಂದ ಬೆಂಗಳೂರು ಹಾಗೂ ಚೆನೈಗೆ ಹೋಗುವ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದೆ. ಆಂಧ್ರಪ್ರದೇಶದ ಖಾಸಗಿ ಬಸ್‌ಗಳು ಮತ್ತು ಇತರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ.

ಕೆರೆಯ ಕಟ್ಟೆ ಮೇಲಿನ ರಸ್ತೆ ಹದಗೆಟ್ಟಿದ್ದು, ಜಲ್ಲಿ ಮತ್ತು ಮಣ್ಣಿನಿಂದ ಕೂಡಿದೆ. ಮೊಣಕಾಲುದ್ದ ಗುಂಡಿಗಳು ನಿರ್ಮಾಣವಾಗಿದೆ. ಕೆರೆ ದಾಟುವವರಿಗೂ ಚಾಲಕ ಕ್ಷಣಕಾಲ ಮೈಮರೆತರೂ ಕಷ್ಟ ತಪ್ಪಿದ್ದಲ್ಲ. ಸ್ವಲ್ಪ ನಿಯಂತ್ರಣ ಕಳೆದುಕೊಂಡರೂ ವಾಹನ ಉರುಳುವ ಭಯ ಚಾಲಕರಲ್ಲಿ ಇರುತ್ತದೆ.ರಸ್ತೆ ಇಕ್ಕಟ್ಟಾಗಿರುವ ಕಾರಣ ಸ್ವಲ್ಪ ಆಯ ತಪ್ಪಿದರೆ ದೊಡ್ಡ ಅನಾಹುತ ಸಂಭವಿಸುತ್ತದೆ. ಅಂತರ್ಜಲದ ಕೊರತೆಯಿಂದ ಕೆರೆಗಳಲ್ಲಿ ನೀರಿಲ್ಲದಂತಾಗಿದೆ. ಇದರ ಪರಿಣಾಮ ಪರಿಸರವು ಮಲಿನಗೊಳ್ಳುವ ಜೊತೆ ಗಿಡಗಂಟಿಗಳ ಬೆಳವಣಿಗೆಗೂ ಕಾರಣವಾಗುತ್ತಿವೆ. ಇಲ್ಲಿ ಅಪಾಯದ ಕುರಿತು ಸೂಚನಾ ಫಲಕಗಳಿಲ್ಲ. ತಡೆಗೋಡೆಯು ಇಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.