ADVERTISEMENT

ಬಾಗೇಪಲ್ಲಿ: ತಾ.ಪಂ. ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 8:35 IST
Last Updated 11 ಮಾರ್ಚ್ 2011, 8:35 IST

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಅಂಗನವಾಡಿ ಕೇಂದ್ರದ ಆಹಾರದಲ್ಲಿ ಅಪೌಷ್ಟಿಕಾಂಶ , ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯಗಳು ಇಲ್ಲದಿರುವುದು ಸೇರಿದಂತೆ ವಿವಿಧ  ವಿಷಯಗಳ ಕುರಿತು ಬುಧವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ  ಸಾಮಾನ್ಯ ಸಭೆ  ಆರಂಭವಾಗುತ್ತಿದ್ದಂತೆಯೇ ತಾಲ್ಲೂಕಿನ ಆಲಿಗೇಪಲ್ಲಿ ಹಾಗೂ ವರದೈಗಾರಿಪಲ್ಲಿ ಗ್ರಾಮಗಳ ಅಂಗನವಾಡಿ ಕೇಂದ್ರ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯ ಲಕ್ಷ್ಮೀನರಸಿಂಹಪ್ಪ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಸಿದ ಸಿಡಿಪಿಓ ಅಧಿಕಾರಿ, ಆಲಿಗೇಪಲ್ಲಿ ಗ್ರಾಮದಲ್ಲಿ  ಕಡಿಮೆ ಮಕ್ಕಳು ಇರುವುದರಿಂದ ಅಂಗನವಾಡಿ ಕೇಂದ್ರ  ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಆಲಿಗೇಪಲ್ಲಿ ಗ್ರಾಮದಲ್ಲಿ ಕಿರು ಅಂಗನವಾಡಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ತಾಲ್ಲೂಕಿನಲ್ಲಿ ಸುಮಾರು 77 ಶಾಲಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಶೌಚಾಲಯವಿದ್ದೂ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಉತ್ತಮ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ  ಶಿಕ್ಷಕರು  ಹಗಲು ರಾತ್ರಿ ತರಗತಿ ಬಿಇಒ ಎಂ.ಆರ್.ಕೃಷ್ಣಪ್ಪ ಸಭೆಗೆ ಮಾಹಿತಿ ತಿಳಿಸಿದರು.

ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಜಯರಾಂ, ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ಕೊರೆಯಲಾಗುತ್ತಿದೆ. ಕುಡಿಯವ ನೀರಿನ ಸೌಲಭ್ಯಕ್ಕೆ ತಾ.ಪಂ. ವತಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಬೇಕೆಂದು ಸಭೆಗೆ ಮನವಿ ಮಾಡಿದರು. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳು ಇದೆ. ಕಿತ್ತೂರು ರಾಣಿ ಚೆನ್ನಮ್ಮಾ ಹಾಗು ಮೊರಾರ್ಜಿ ದೇಸಾಯಿ ವಸತಿ ನಿಲಯಗಳಿವೆ.  93 ಮಹಿಳಾ ಸಂಘಗಳಿಗೆ ಸುಮಾರು ಶೇ.10ರಷ್ಟು ಸಬ್ಸಿಡಿಯನ್ನು ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣಾಧಿಕಾರಿ ಮುನಿಯಮ್ಮ ಸಭೆಗೆ ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುತ್ತಿರುವ ಆಹಾರ ಪದ್ದತಿಯಲ್ಲಿ ಅಪೌಷ್ಟಿಕಾಂಶ ಇದೆ ಎಂದು ತಾ.ಪಂ. ಅಧ್ಯಕ್ಷೆ ಶೋಭಾರಾಣಿ ಪ್ರಶ್ನಿಸಿದಾಗ, ಸಿಡಿಪಿಓ ಅಧಿಕಾರಿ ಲಕ್ಷ್ಮೀದೇವಮ್ಮ ಉತ್ತಮ ಪೌಷ್ಟಿಕಾಂಶದ ಆಹಾರವನ್ನು ವಿತರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ತಾಲ್ಲೂಕಿನ ಜಿಮದ್ದೇಪಲ್ಲಿ, ಗೂಳೂರು, ಹಾಗೂ ಶಿವಪುರ ಗ್ರಾಮಗಳ ಕಡೆ ಮಲೇರಿಯಾ ಜ್ವರದ ಲಕ್ಷಣಗಳು ಕಾಣಿಸುತ್ತಿವೆ ಎಂದು ಪ್ರಶ್ನಿಸಿದಾಗ. ‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ಹಾಗೂ ಅರ್ಹ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಣುಕ ಸಭೆಗೆ ತಿಳಿಸಿದರು. 

ಸಭೆಯಲ್ಲಿ  ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಪಿ.ನಾಗಪ್ಪ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಶಂಕರರೆಡ್ಡಿ, ನಾರಾಯಣ ನಾಯ್ಕಿ, ನಾರಾಯಣಪ್ಪ, ಗೋಪಾಲಕೃಷ್ಣ, ಮುನಿರತ್ನಮ್ಮ, ಉತ್ತಮ್ಮ, ಸುಜಾತಮ್ಮ, ನಿರ್ಮಲಮ್ಮ, ಜಯಸಿಂಹಾರೆಡ್ಡಿ   ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.