ADVERTISEMENT

ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 4:50 IST
Last Updated 5 ಅಕ್ಟೋಬರ್ 2012, 4:50 IST

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಚ್.ಎನ್.ವೃತ್ತದಿಂದ ಹೊರಟು ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಮರ್ಪಕ ವಿದ್ಯುತ್ ಕಲ್ಪಿಸದ ಸರ್ಕಾರ ಹಾಗೂ ಬೆಸ್ಕಾಂ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಮಂಜುನಾಥರೆಡ್ಡಿ ಮಾತನಾಡಿ `ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ಕೃಷಿ ಪಂಪ್‌ಸೆಟ್‌ಗಳ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ಇಲ್ಲವಾಗಿದೆ. ಇದರಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಇದರಿಂದ ತಾಲ್ಲೂಕಿಗೆ ಕಡಿಮೆ ವಿದ್ಯುತ್ ಸರಬರಾಜು ಆಗುತ್ತಿದೆ.
 
ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಕಲ್ಪಿಸಲು ತಾಲ್ಲೂಕಿಗೆ ಸುಮಾರು ರೂ. 15 ಕೋಟಿ ಬಂದಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕಲ್ಪಿಸಲು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಪರಿಕರಗಳಿಗೆ ರೂ. 15 ಕೋಟಿ ಬಳಸಿಕೊಳ್ಳಲಾಗಿದೆ~ ಎಂದು ಆರೋಪಿಸಿದರು.

ತಾಲ್ಲೂಕಿನ 6 ವಿದ್ಯುತ್ ಉಪಕೇಂದ್ರಗಳಲ್ಲಿ ಸಮರ್ಪಕವಾಗಿ ಎಂಜಿನಿಯರ್, ಸಿಬ್ಬಂದಿ ಕೊರತೆ ಇದೆ. ಅಕ್ರಮ-ಸಕ್ರಮ ಅಡಿಯಲ್ಲಿ ಸುಮಾರು 2693 ಅರ್ಜಿ ನೀಡಲಾಗಿದೆ. ಸಾಲ ಹಾಗೂ ಮನೆಯಲ್ಲಿ ಇರುವ ವಸ್ತುಗಳನ್ನು ಮಾರಿ ರೂ.15 ಸಾವಿರ ಕಟ್ಟಿದ್ದಾರೆ. ಆದರೆ ಇದುವರಿಗೂ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಕಲ್ಪಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಸ್ಥಳಕ್ಕೆ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಗುರುಸ್ವಾಮಿ ಆಗಮಿಸಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ವಿದ್ಯುತ್ ಉತ್ಪಾದನೆ ಕೊರತೆ ಇದೆ. ತಾಲ್ಲೂಕಿಗೆ 8-10 ಗಂಟೆ ವಿದ್ಯುತ್ ಸರಬರಾಜು ಮಾಡಲು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಲಾಗುವುದು. ಅಕ್ರಮ-ಸಕ್ರಮ ರೈತರಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಸಂಘದ ಅಧ್ಯಕ್ಷ ಆರ್.ಚಂದ್ರಶೇಖರರೆಡ್ಡಿ, ಮುಖಂಡರಾದ ವೆಂಕಟರೆಡ್ಡಿ, ನಾಗಿರೆಡ್ಡಿ, ರಾಮಲಿಂಗಪ್ಪ, ಜಿ.ಕೃಷ್ಣಪ್ಪ, ಗೋರ್ವಧನಚಾರಿ, ರಮೇಶ್‌ಬಾಬು, ಆನಂದ, ಎ.ಎನ್.ಶ್ರೀರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.