ಬಾಗೇಪಲ್ಲಿ: ಹಮಾಲಿ ಸದಸ್ಯರಿಗೆ ಪಡಿತರ ಚೀಟಿ, ಮನೆ, ನಿವೇಶನ, ಕಲ್ಯಾಣ ನಿಧಿಯ ಆದಾಯದ ಶೇ 10ರಷ್ಟು ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಗುರುವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಎಚ್.ಎನ್.ವೃತ್ತದಿಂದ ಹೊರಟ ಹಮಾಲಿ ಸದಸ್ಯರು ಮುಖ್ಯರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ನಂತರ ಬಸ್ ನಿಲ್ದಾಣದ ಮುಂದೆ ಜಮಾಯಿಸಿ ಟೆಂಪೋಗಳಲ್ಲಿ `ವಿಧಾನಸೌಧ ಚಲೋ' ಕಾರ್ಯಕ್ರಮ ಪ್ರಯುಕ್ತ ಬೆಂಗಳೂರಿಗೆ ಪ್ರಯಾಣಿಸಿದರು.
ಸಿಐಟಿಯು ತಾಲ್ಲೂಕು ಉಪಾಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ `ಕಾರ್ಮಿಕರ ಭದ್ರತಾ ಮಂಡಳಿ ಮೂಲಕ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಹಮಾಲಿಯವರಿಗೆ ವಿಸ್ತರಿಸಬೇಕು. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು. ಈಗಾಗಲೇ ಚಿಲ್ಲರೆ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ . ಕಾರ್ಮಿಕರ ಪರ ಸರ್ಕಾರ ಯೋಚಿಸಬೇಕು ಎಂದು ಆಗ್ರಹಿಸಿದರು.
`55 ವರ್ಷ ಮೀರಿದ ಹಮಾಲಿಗಳಿೆ ಪಿಂಚಣಿ ಕಲ್ಪಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ ಹಮಾಲಿ ಕಾರ್ಮಿಕರಿಗೆ ನಿಗದಿತ ವೇತನ ನೀಡಬೇಕು ಎಂದು ಒತ್ತಾಯ ಮಾಡಿದರು.
ಕಡಿಮೆ ವೇತನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಉದ್ಯೋಗ ಭದ್ರತೆ ಇಲ್ಲದೆ ಅತಂತ್ರದಲ್ಲಿ ಜೀವನ ಸಾಗಿಸಬೇಕಾಗಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ತಾಲ್ಲೂಕು ಮುಖಂಡ ಮುಸ್ತಾಫ, ತಾಲ್ಲೂಕು ಹಮಾಲಿ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಶಂಕರರಪ್ಪ, ಶ್ರೀನಿವಾಸ್, ವೆಂಕಟೇಶಪ್ಪ ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.