ADVERTISEMENT

ಬೋರ್ಡ್‌ನಲ್ಲಿ ಕಾಂಕ್ರಿಟ್‌, ರೋಡ್‌ನಲ್ಲಿ ಕೆಸರು!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:49 IST
Last Updated 9 ಅಕ್ಟೋಬರ್ 2017, 5:49 IST
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ರಸ್ತೆಯ ಸಮನಾಂತರ ರಸ್ತೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಿದ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಯ ನಾಮಫಲಕ.
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ರಸ್ತೆಯ ಸಮನಾಂತರ ರಸ್ತೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಿದ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಯ ನಾಮಫಲಕ.   

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಡೆದಿರುವ ಕಾಂಕ್ರಿಟ್‌ ರಸ್ತೆ ಕಾಮಗಾರಿಯ ಬಗ್ಗೆ ಸ್ಥಳೀಯರು ‘ಅಕ್ರಮ’ ನಡೆದಿರುವ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಕಾಮಗಾರಿ ಮಾಹಿತಿ ಫಲಕದಲ್ಲಿ ‘ಬೈರೇಗೌಡ ಮನೆಯಿಂದ ಜೆ.ಪಿ.ಇಂಟರ್‌ನ್ಯಾಷನಲ್‌ ಸ್ಕೂಲ್‌ವರೆಗೆ ಸಿ.ಸಿ (ಕಾಂಕ್ರಿಟ್‌) ರಸ್ತೆ ನಿರ್ಮಾಣ ಕಾಮಗಾರಿ’ ಎಂದು ನಮೂದಿಸಲಾಗಿದೆ. ಆದರೆ ವಾಸ್ತವದಲ್ಲಿ ಜೆ.ಪಿ.ಇಂಟರ್‌ನ್ಯಾಷನಲ್‌ ಸ್ಕೂಲ್‌ ವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಿಸಿಲ್ಲ. ಶಾಲೆ ಎದುರಿನ ರಸ್ತೆ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ.

ಶಾಸಕ ಡಾ.ಕೆ.ಸುಧಾಕರ್‌ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ₹ 7.50 ಲಕ್ಷ ವೆಚ್ಚದಲ್ಲಿ ನಾಲ್ಕೈದು ತಿಂಗಳ ಹಿಂದೆ ಈ ರಸ್ತೆ ಕಾಮಗಾರಿ ನಡೆದಿತ್ತು. ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ಉಪವಿಭಾಗ ಕಾಮಗಾರಿ ಉಸ್ತುವಾರಿ ನೋಡಿಕೊಂಡಿತ್ತು. 

ಫಲಕದಲ್ಲಿ ತೋರಿಸಿರುವಂತೆ ಲೆಕ್ಕ ಹಾಕಿದರೆ ಬೈರೇಗೌಡ ಅವರ ಮನೆಯಿಂದ ಜೆ.ಪಿ.ಇಂಟರ್‌ನ್ಯಾಷನಲ್‌ ಶಾಲೆ ವರೆಗೆ  ಸುಮಾರು 200 ಮೀಟರ್‌ ದೂರವಿದೆ. ಆದರೆ ಬೈರೇಗೌಡ ಅವರ ಮನೆಯಿಂದ ನಾಗಪ್ಪ ಎಂಬುವವರ ಮನೆ ವರೆಗೆ ಮಾತ್ರ 113 ಮೀಟರ್‌ನಷ್ಟು ಮಾತ್ರ ಕಾಂಕ್ರಿಟ್‌ ಹಾಕಿದ್ದಾರೆ. ಇದರಿಂದ ಸಹಜವಾಗಿಯೇ ಜನರಲ್ಲಿ ಅನುಮಾನ ಮೂಡಿಸಿದೆ. ಕೆಲವರಂತೂ ‘ಇದು ಹಣ ಹೊಡೆಯಲು ಮಾಡಿದ ಕಾಮಗಾರಿ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಈ ಕುರಿತು ನಗರಸಭೆಯ ಸ್ಥಳೀಯ ಸದಸ್ಯೆ ಶ್ವೇತಾ ಅವರನ್ನು ಸಂಪರ್ಕಿಸಿದಾಗ ಮಾತಿಗೆ ಅವರ ಪತಿ ಮಂಜುನಾಥ್ ಸಿಕ್ಕರು. ‘ಕಾಮಗಾರಿ ಆರಂಭಿಸಿದಾಗ ನಾನು ಪೂರ್ತಿ ರಸ್ತೆಗೆ ಕಾಂಕ್ರಿಟ್‌ ಹಾಕುವುದಾದರೆ ಹಾಕಿ, ಇಲ್ಲದಿದ್ದರೆ ಬೇಡ ಎಂದು ಕೆಲಸ ನಿಲ್ಲಿಸಿದ್ದೆ. ಬೇರೆ ಅನುದಾನದಲ್ಲಿ ಹಾಕಿಸಿಕೊಡುತ್ತೇವೆ ಎಂದು ನಗರಸಭೆ ಅಧಿಕಾರಿಗಳು ಭರವಸೆ ಕೊಟ್ಟ ಕಾರಣಕ್ಕೆ ಸುಮ್ಮನಾದೆ. ಮೊದಲು ರಸ್ತೆ ಅಳತೆ ಮಾಡಿ ಬಳಿಕ ಕಾಮಗಾರಿ ಅಂದಾಜು ಪಟ್ಟಿ ಸಿದ್ಧಪಡಿಸಬೇಕಿತ್ತು.

ಆದರೆ ಇಲ್ಲಿ ಆ ರೀತಿ ಅಗಲಿಲ್ಲ’ ಎಂದು ತಿಳಿಸಿದರು. ‘ಸದ್ಯ ಕಾಂಕ್ರಿಟ್‌ ಮಾಡಿರುವ ರಸ್ತೆ ತುಂಬಾ ಅಗಲವಿದೆ. ಹೀಗಾಗಿ ಎಂಜಿನಿಯರ್‌ ಅವರ ಲೆಕ್ಕಾಚಾರ ತಪ್ಪಾಗಿದೆ. ಆದರೆ ಜನರು ಮಾತ್ರ ಕಾರ್ಪೋರೇಟರ್‌ ದುಡ್ಡು ತಿಂದಿದ್ದಾನೆ ಎಂದು ಮಾತನಾಡಿಕೊಳ್ಳುತ್ತಾರೆ. ನಮ್ಮದೇನೂ ತಪ್ಪಿಲ್ಲ. ಶೀಘ್ರದಲ್ಲಿಯೇ ಬಾಕಿ ರಸ್ತೆಗೂ ಕಾಂಕ್ರಿಟ್‌ ಹಾಕಿಸುತ್ತೇವೆ’ ಎಂದು ಹೇಳಿದರು. ಈ ಬಗ್ಗೆ ನಗರಸಭೆ ಆಯುಕ್ತ ಉಮಾಕಾಂತ್ ಅವರನ್ನು ಪ್ರಶ್ನಿಸಿದರೆ, ‘ಇದು ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸುತ್ತೇನೆ’ ಎಂದರು.

ರಸ್ತೆಗೆ ಹೆಜ್ಜೆ ಇಡಲು ಭಯ!
‘ಅಧಿಕಾರಿಗಳೇನೋ ನಮ್ಮ ಮನೆ ಎದುರು ಕಾಂಕ್ರಿಟ್ ರಸ್ತೆ ಮಾಡಿದ್ದೇವೆ ಎಂದು ಬೋರ್ಡ್‌ನಲ್ಲಿ ತೋರಿಸಿದ್ದಾರೆ. ನೀವೇ ತೋರಿಸಿ ಎಲ್ಲಿದೆ ಇಲ್ಲಿ ಕಾಂಕ್ರಿಟ್‌? ಈ ಹಾಳಾದ ರಸ್ತೆಯಲ್ಲಿ ಸಂಚರಿಸಲು ಸ್ಥಳೀಯರು ನಿತ್ಯವೂ ಸರ್ಕಸ್‌ ಮಾಡಬೇಕಾಗಿದೆ. ಇತ್ತೀಚೆಗೆ ಈ ರಸ್ತೆಯಲ್ಲಿ ಶಿಕ್ಷಕರೊಬ್ಬರು ಬಿದ್ದು ಮೊಣಕಾಲಿಗೆ ಗಾಯವಾಗಿ ಎರಡು ತಿಂಗಳು ರಜೆ ಹಾಕಬೇಕಾಯಿತು. ನನಗೆ ಆರೋಗ್ಯ ಸರಿಯಿಲ್ಲ. ಆ ಘಟನೆಯ ಬಳಿಕ ಮಳೆಯಾದರೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ನರಸಿಂಹಮೂರ್ತಿ ಅಳಲು ತೋಡಿಕೊಂಡರು.

‘ಇಲ್ಲಿ ಚರಂಡಿಗಳು ಮುಚ್ಚಿವೆ. ಕುಡಿಯುವ ನೀರು ಕೂಡ ಬರುತ್ತಿಲ್ಲ. ಸ್ವಚ್ಛತೆ ಎನ್ನವುದು ಇಲ್ಲವೇ ಇಲ್ಲ. ಹೀಗಾಗಿ ಹಾವುಗಳ ಕಾಟ ಹೆಚ್ಚಾಗಿದೆ. ಈ ಹಾಳಾದ ರಸ್ತೆಯಿಂದ ಆಟೊದವರೂ ಇತ್ತ ತಲೆಯೇ ಹಾಕುವುದಿಲ್ಲ. ಇಲ್ಲಿ ಪಾದಚಾರಿಗಳು ಮತ್ತು ವಾಹನ ಸವಾರರು ಸರ್ಕಸ್‌ ಮಾಡಿಕೊಂಡೇ ಓಡಾಡಬೇಕು. ಇದನ್ನೆಲ್ಲ ಶಾಸಕರ ಗಮನಕ್ಕೆ ಕೂಡ ತಂದಾಯ್ತು. ಏನೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.