ಗೌರಿಬಿದನೂರು: ಅಧಿಕಾರಕ್ಕಿಂತ ದೇಶದಲ್ಲಿನ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡುವುದು ಆಮ್ ಆದ್ಮಿ ಪಕ್ಷದ ಉದ್ದೇಶ ಎಂದು ಕೋಲಾರ ಲೋಕಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ತಾಲ್ಲೂಕಿನ ವಿದುರಾಶ್ವತ್ಥದಿಂದ ಭಾನುವಾರ ಆರಂಭಿಸಿದ ಚುನಾವಣಾ ಪ್ರಚಾರದ ಕಾಲ್ನಡಿಗೆ ಜಾಥಾ ಸಂದರ್ಭ ಮಾತನಾಡಿ, ಅಂದು ಸ್ವಾಂತಂತ್ರ್ಯಕ್ಕಾಗಿ ಹೋರಾಟ ನಡೆಸಲಾಯಿತು. ಅದೇ ರೀತಿ ಇಂದು ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ರಾಜಕೀಯ ಎನ್ನುವುದು ತೋಳ್ಬಲ ಹಾಗೂ ಹಣಬಲ ಇರುವವರಿಗೆ ಮಾತ್ರ ಎಂಬುದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತುಪಡಿಸಿವೆ ಎಂದರು.
ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕಿ ರಾಜಕೀಯ ಅಧಿಕಾರ ಸಾಮಾನ್ಯ ವ್ಯಕ್ತಿಗೂ ಸಿಗುವಂತಾಗಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ಆಧಿಕಾರಾವಧಿಯಲ್ಲಿ ದೇಶದ ಸಂಪತ್ತು ಲೂಟಿ ಮಾಡಿ ದಿವಾಳಿಯತ್ತ ಕೊಂಡೊಯ್ದಿದ್ದಾರೆ. ನರೇಂದ್ರ ಮೋದಿ ರಕ್ತಸಿಕ್ತ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಜತೆ ಕೈ ಜೊಡಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಸಾಮಾನ್ಯ ಜನರ ಬದುಕು ಅತಂತ್ರಗೊಳಿಸಿದ್ದಾರೆ. ವೀರಪ್ಪ ಮೊಯಿಲಿ ಪರಮ ಸುಳ್ಳುಗಾರ, ಬಿ.ಎನ್.ಬಚ್ಚೇಗೌಡ ಭೂಗಳ್ಳ, ಕೆ.ಎಚ್. ಮುನಿಯಪ್ಪ ಹಣದ ರಾಜಕಾರಣ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಬೇರು ಬಿಟ್ಟು, ಮುಂದಿನ ಚುನಾವಣೆ ವೇಳೆಗೆ ದಕ್ಷಿಣ ಭಾರತದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಗುಡಿಸಿಹಾಕುತ್ತದೆ ಎಂದರು. ಪಕ್ಷದ ಕಾರ್ಯಕರ್ತರಾದ ಗಂಗಾಧರಪ್ಪ, ನರಸಿಂಹಸ್ವಾಮಿ, ವೆಂಕಟೇಶ್, ಮೊಹಿತ್, ದುರ್ಗಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.