ADVERTISEMENT

ಮಗ್ಗದವರ ಲಾಬಿಗೆ ಮಣಿದ ಕೇಂದ್ರ: ಮುನಿಯಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 9:10 IST
Last Updated 6 ಮಾರ್ಚ್ 2011, 9:10 IST

ಶಿಡ್ಲಘಟ್ಟ: ಮಗ್ಗದವರ ಲಾಬಿಗೆ ಮಣಿದು ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಕಡಿತಗೊಳಿಸಿರುವುದರಿಂದ ಬಡ ರೈತ ಹಾಗೂ ರೀಲರುಗಳಿಗೆ ನಷ್ಟವುಂಟಾಗುತ್ತಿದೆ ಎಂದು ಶಾಸಕ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.

 ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಜಂಗಮಕೋಟೆ ಹೋಬಳಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಜೊತೆ ಶಾಸಕರ ನಿಯೋಗ ಹೊರಟು ಪ್ರಧಾನಮಂತ್ರಿ ಹಾಗೂ ಜವಳಿ ಖಾತೆ ಸಚಿವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸುತ್ತೇವೆ. ರಾಜ್ಯ ಸರ್ಕಾರ ರೇಷ್ಮೆ ಖರೀದಿಸುವುದಾಗಿ ಆಶ್ವಾಸನೆ ನೀಡಿದೆ. ಇಷ್ಟಕ್ಕೂ ರೈತರಿಗೆ ತೊಂದರೆಯಾದರೆ ಹೋರಾಟಕ್ಕೂ ಸಿದ್ಧವಿರುವುದಾಗಿ ತಿಳಿಸಿದರು.

 ಜಿಲ್ಲೆಗೆ ಬೇಕಾದ ಶಾಶ್ವತ ನೀರಾವರಿಗಾಗಿ ರಾಜ್ಯ ಸರ್ಕಾರದಿಂದ ಆಶ್ವಾಸನೆ ದೊರಕಿದೆಯಾದರೂ ಚಾಲನೆ ಪಡೆದುಕೊಳ್ಳುತ್ತಿಲ್ಲ. ಬೇಸಿಗೆ ಬಂದು ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದುರಿಸುವಂತಾದಾಗ ಸರ್ಕಾರ ಜನರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಮುಂದಿನ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಿಗಾಗಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 10 ಎಕರೆವರೆಗೂ ಮಾವಿನ ಸಸಿ ಹಾಕಿದರೆ ಮೂರು ವರ್ಷಗಳ ಕಾಲ ನಿರ್ವಹಣೆ ಖರ್ಚನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಯೋಜನೆಯ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು ಎಂದರು.

ತಹಶೀಲ್ದಾರ್ ಮಲ್ಲಿಕಾರ್ಜುನ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಮರನಾಥ್, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ಪ, ಜಿ.ಪಂ. ಸದಸ್ಯ ಕಂಬದಹಳ್ಳಿ ಸತೀಶ್, ತಾ.ಪಂ. ಅಧ್ಯಕ್ಷ ವೇಣುಗೋಪಾಲ್, ಸದಸ್ಯೆ ರಾಧಿಕಾ ಮಂಜುನಾಥ್, ಮಳ್ಳೂರು ಗ್ರಾ.ಪಂ. ಅಧ್ಯಕ್ಷೆ ಜಯಮ್ಮ ಮುನಿನಾಗಪ್ಪ, ಉಪಾಧ್ಯಕ್ಷ ನಿಶಾಂತ್, ಸದಸ್ಯ ರಾಜೇಶ್, ಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಮಂಜುನಾಥಬಾಬು, ಬಿಇಒ ಶಿಕ್ಷಣಾಧಿಕಾರಿ ಶ್ರೀಕಂಠ, ಚಂದ್ರೇಗೌಡ, ನಾಗರಾಜ್,  ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.