ADVERTISEMENT

ಮನೆ ಮನೆಗಳಲ್ಲಿ ಕನ್ನಡ ಕಾರ್ಯಕ್ರಮ ನಡೆಯಬೇಕು

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 6:04 IST
Last Updated 3 ಜುಲೈ 2017, 6:04 IST
ಶಿಡ್ಲಘಟ್ಟದಲ್ಲಿ ಭಾನುವಾರ  ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಕೆ.ಎಚ್‌.ಬಿ.ಕಾಲೊನಿಯ ಸುಂದರನ್‌ ಅವರ ಶ್ರೀನಿಲಯದಲ್ಲಿ ಆಯೋಜಿಸಿದ್ದ ‘ಚಾವಡಿಯಲ್ಲಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್‌ ಮಾತನಾಡಿದರು. ಶಾಸನತಜ್ಞ ಡಾ.ಆರ್‌.ಶೇಷಶಾಸ್ತ್ರಿ, ಟೋಟಲ್‌ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ್‌, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಹಾಜರಿದ್ದರು
ಶಿಡ್ಲಘಟ್ಟದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಕೆ.ಎಚ್‌.ಬಿ.ಕಾಲೊನಿಯ ಸುಂದರನ್‌ ಅವರ ಶ್ರೀನಿಲಯದಲ್ಲಿ ಆಯೋಜಿಸಿದ್ದ ‘ಚಾವಡಿಯಲ್ಲಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್‌ ಮಾತನಾಡಿದರು. ಶಾಸನತಜ್ಞ ಡಾ.ಆರ್‌.ಶೇಷಶಾಸ್ತ್ರಿ, ಟೋಟಲ್‌ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ್‌, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಹಾಜರಿದ್ದರು   

ಶಿಡ್ಲಘಟ್ಟ: ‘ಮನೆ ಮನೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುತ್ತಾ, ಅರಳುತ್ತಿರುವ ಕೆಲಸ ಶ್ಲಾಘನೀಯ. ಜಿ.ಪಿ.ರಾಜರತ್ನಂ ತಮ್ಮನ್ನು ಕನ್ನಡ ಪರಿಚಾರಕ ಎಂದು ಕರೆದುಕೊಳ್ಳತ್ತಾ ಕನ್ನಡದ ಪುಸ್ತಕಗಳನ್ನು ಕನ್ನಡದ ಮನಸ್ಸುಗಳಿಗೆ ತಲುಪಿಸುವ ಕೆಲಸ ಮಾಡಿ ಪ್ರೇರಕರಾಗಿದ್ದಾರೆ’ ಎಂದು ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್‌ ತಿಳಿಸಿದರು.

ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಭಾನುವಾರ ಕೆ.ಎಚ್‌.ಬಿ.ಕಾಲೊನಿಯ ಸುಂದರನ್‌ ಅವರ ನಿಲಯದಲ್ಲಿ ಆಯೋಜಿಸಿದ್ದ ‘ಚಾವಡಿಯಲ್ಲಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕನ್ನಡ ಭಾಷೆ ಮತ್ತು ಇತರ ಭಾಷೆಗಳನ್ನು ಹಾಸ್ಯ ಮಿಶ್ರಿತವಾಗಿ, ಕ್ರಿಯಾಶೀಲತೆಯಿಂದ ಅವಲೋಕಿಸಿದಾಗ ಹೊಸ ಪದಗಳು ಹುಟ್ಟುತ್ತವೆ. ಮೊಬೈಲ್‌ಗೆ ‘ಸನಿಹ ವಾಣಿ’, ಸಾಕ್ಸ್‌ಗೆ ‘ಕೆರವಸ್ತ್ರ’, ವೈರಸ್‌ಗೆ ‘ಕುತಂತ್ರಾಂಶ’ ಹೀಗೆ ಕನ್ನಡವನ್ನು ಕ್ರಿಯಾತ್ಮಕವಾಗಿ ಬಳಸಬಹುದು. ನ.ಕಸ್ತೂರಿ, ದ.ರಾ.ಬೇಂದ್ರೆ ಮುಂತಾದವರು ಕನ್ನಡದ ಹೊಸ ಪದಗಳ ಹುಟ್ಟಿಗೆ ಕಾರಣರಾದರು. ಚಿ.ಶ್ರೀನಿವಾಸರಾಜು ಅವರು ಕನ್ನಡದ ಪರಿಚಾರಕರಾಗಿ ಕೆಲಸ ಮಾಡಿದ್ದರು’ ಎಂದು ಹೇಳಿದರು.

ADVERTISEMENT

ಕನ್ನಡ ಮತ್ತು ಇತರೆ ಭಾಷೆಗಳಿಗೆ ಹಾಸ್ಯ ಮಿಶ್ರಿತವಾಗಿ ಹೋಲಿಕೆ ಮಾಡುತ್ತಾ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಶಾಸನತಜ್ಞ ಡಾ.ಆರ್‌.ಶೇಷಶಾಸ್ತ್ರಿ ಮಾತನಾಡಿ, ‘ಕನ್ನಡ ಬೆಳೆಯಬೇಕಿದ್ದರೆ ನಾವು ಬೆಳೆಯಬೇಕು. ಬದುಕನ್ನು ಎದುರಿಸಲು ಜೀವನದಲ್ಲಿ ಹಾಸ್ಯವು ಉತ್ಸಾಹವನ್ನು ತುಂಬುತ್ತದೆ. ಜೀವನವನ್ನು ಅರ್ಥೈಸಿಕೊಳ್ಳಿ, ಅಕ್ಕಪಕ್ಕದವರನ್ನು ಹಾಗೂ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುತ್ತಾ ಜೀವನ ಮೌಲ್ಯವನ್ನು ಬೆಳೆಸಿಕೊಳ್ಳುವಂತೆ’ ಹೇಳಿದರು.

‘ಜನರು ನಡೆದು ಹೋಗಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸುವ ರೀತಿಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ, ಕನ್ನಡ ಸಾಂಸ್ಕೃತಿಕ ಕಾಲುದಾರಿಗಳನ್ನ ಹೆದ್ದಾರಿಗಳನ್ನ ತೋರಿಸುವಂಥ ಕೈಮರವಾಗಲಿ’ ಎಂದು ನುಡಿದರು.

ಟೋಟಲ್‌ ಕನ್ನಡ ಸಂಸ್ಥೆಯ ವತಿಯಿಂದ ತಾತ್ಕಾಲಿಕ ಕನ್ನಡ ಪುಸ್ತಕ ಮಳಿಗೆಯನ್ನು ತೆರೆಯಲಾಗಿತ್ತು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್‌, ಶಾಸನತಜ್ಞ ಡಾ.ಆರ್‌.ಶೇಷಶಾಸ್ತ್ರಿ, ಟೋಟಲ್‌ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ್‌ ಹಾಗೂ ಅಜಿತ್‌ ಕೌಂಡಿನ್ಯ ದಂಪತಿಯನ್ನು ಗೌರವಿಸಲಾಯಿತು.

ಟೋಟಲ್‌ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ್‌, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌. ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಚಂದ್ರಶೇಖರ್‌, ಚೂಡಾಮಣಿ, ಸುಂದರನ್‌, ಕೆ.ಎಲ್‌.ರಮಾ, ಅಜಿತ್‌ ಕೌಂಡಿನ್ಯ, ನವ್ಯಾ, ಪಿ.ವಿ.ಶ್ರೀನಿವಾಸಶಾಸ್ತ್ರಿ, ನೆಲಮಂಗಲ ಕೃಷ್ಣಮೂರ್ತಿ, ಬಿ.ಆರ್‌.ಪ್ರಭಾಕರ್‌, ನಾರಾಯಣ್‌, ಚಂದ್ರಶೇಖರ ಹಡಪದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.