ADVERTISEMENT

ಮಳಿಗೆಗಳಲ್ಲಿ ಸಕಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:00 IST
Last Updated 11 ಫೆಬ್ರುವರಿ 2012, 10:00 IST

ಚಿಕ್ಕಬಳ್ಳಾಪುರ: ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳದಲ್ಲಿ ಒಟ್ಟು 60 ಮಳಿಗೆಗಳಿದ್ದು, ಒಂದೊಂದು ಮಳಿಗೆಯಲ್ಲೂ ಹಲವು ರೀತಿಯ ಮಾಹಿತಿಗಳನ್ನು ಪಡೆಯಬಹುದು. ಸಾವಯವ ಕೃಷಿ ಉತ್ತೇಜಕ ಸಂಸ್ಥೆಯು ಸಾವಯವ ಕೃಷಿ ಉತ್ಪನ್ನಗಳನ್ನು ಮಾರುತ್ತಿದೆ. ಕೃಷಿ ತಂತ್ರಜ್ಞರ ನಿರ್ವಹಣಾ ಸಂಸ್ಥೆ `ಆತ್ಮ~ ಸಂಸ್ಥೆಯು ತನ್ನ ಯೋಜನೆಗಳನ್ನು ಪರಿಚಯಿಸುತ್ತದೆ.

ಕೃಷಿ ಇಲಾಖೆಯು ಖುಷ್ಕಿ ಪ್ರದೇಶದಲ್ಲಿ ಬೇಸಾಯ ತಾಂತ್ರಿಕತೆ ಅಳವಡಿಕೆ ಮತ್ತು ಉತ್ಪಾದನೆ ವರ್ಧಿಸುವ ಯೋಜನೆಯ ಕುರಿತು ಮಾಹಿತಿ ನೀಡುತ್ತದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮಳಿಗೆಯಲ್ಲಿ ಕರುಗಳ ಪಾಲನೆ, ಪ್ರಾಣಿಜನ್ಯ ರೋಗಗಳು ಮತ್ತು ಜಾನುವಾರು ವಿಮಾ ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು.

ಜಲಾನಯನ ಅಭಿವೃದ್ಧಿ ಇಲಾಖೆಯ ಮಳಿಗೆಯಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಬಗ್ಗೆ ಮಾಹಿತಿ ಪಡೆದರೆ, ಕೃಷಿ ಇಲಾಖೆಯ ಮತ್ತೊಂದು ಮಳಿಗೆಯಲ್ಲಿ ಕೃಷಿ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು ಮತ್ತು ರೈತರಿಗೆ ದೊರೆಯುವ ಸೌಲಭ್ಯಗಳನ್ನು ಪಡೆಯಬಹುದು.
 
ರೇಷ್ಮೆ ಇಲಾಖೆಯ ಮಳಿಗೆಯಲ್ಲೂ ಉಪಯುಕ್ತ ಮಾಹಿತಿ ಪಡೆಯಬಹುದು.  ಮೀನುಗಾರಿಕೆ ಇಲಾಖೆಯ ಸಿಬ್ಬಂದಿಯಿಂದ ಮೀನುಗಾರಿಕೆ ಬಗ್ಗೆ ಮಾಹಿತಿ ಸಂಗ್ರಹಿಸಬಹುದು. ವಿವಿಧ ಖಾಸಗಿ ಸಂಘ-ಸಂಸ್ಥೆಗಳು ಅತ್ಯಾಧುನಿಕ ಮಾದರಿಯ ಕೃಷಿ ಉಪಕರಣಗಳನ್ನು ಪ್ರದರ್ಶಿಸಿದ್ದರು. ಮಳಿಗೆಗಳ ಪ್ರತಿನಿಧಿಗಳು ಪ್ರಾತ್ಯಕ್ಷಿಕೆ ಸಾದರಪಡಿಸುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.