ADVERTISEMENT

ಮಹಾದಾಯಿ ವಿವಾದ: ನ್ಯಾಯಮಂಡಳಿಯತ್ತ ಸಿಎಂ ಒಲವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 6:03 IST
Last Updated 30 ಡಿಸೆಂಬರ್ 2017, 6:03 IST

ಶಿಡ್ಲಘಟ್ಟ: ‘ಕುವೆಂಪು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದ ಮೇರು ಪರ್ವತವಾಗಿದ್ದರು. ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಕುವೆಂಪು’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕುವೆಂಪು ಮಾನವ ಕುಲಕ್ಕೆ ನೀಡಿದ ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ’ ಎಂದರು.

ADVERTISEMENT

‘ಕುವೆಂಪು ಬಹುತೇಕ ಕೃತಿಗಳಲ್ಲಿ ಮಾನವೀಯತೆಯ ಸಂದೇಶ ಅಡಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಕುವೆಂಪು ಅವರ ಕೃತಿಗಳನ್ನು ಓದಿದಾಗ, ಕನ್ನಡ ಭಾಷೆಯ ಶ್ರೀಮಂತಿಕೆಯ ಅರಿವು ನಮಗಾಗುತ್ತದೆ’ ಎಂದರು.

‘ಆಧುನಿಕ ಯುಗದಲ್ಲಿ ಮೊಬೈಲ್, ಸಾಮಾಜಿಕ ತಾಣಗಳ ವೀಕ್ಷಣೆಯಲ್ಲೇ ಮಗ್ನರಾಗಿರುವ ಮಕ್ಕಳು ಪುಸ್ತಕಗಳತ್ತ ಆಸಕ್ತಿ ವಹಿಸಬೇಕು’ ಎಂದು ಹೇಳಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್‌ ಕುವೆಂಪು ಅವರ ಬಾಲ್ಯ, ಶಿಕ್ಷಣ, ವೃತ್ತಿ ಜೀವನ, ಸಾಹಿತ್ಯ ಕೃಷಿ, ಕೃತಿಗಳು, ಗೌರವ ಪುರಸ್ಕಾರಗಳ ಬಗ್ಗೆ ವಿವರಿಸಿದರು.

ತಾಲ್ಲೂಕು ಮಟ್ಟದ ಕುವೆಂಪು ಕುರಿತಾದ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕುವೆಂಪು ಭಾವಚಿತ್ರವಿರುವ ಪಲ್ಲಕ್ಕಿಯನ್ನು ನಗರದ ಬಸ್‌ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ಮಾಡಲಾಯಿತು.

ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಸಿಡಿಪಿಒ ಲಕ್ಷ್ಮಿದೇವಮ್ಮ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಕೇಶವರೆಡ್ಡಿ, ಗ್ರೇಡ್‌ 2 ತಹಶೀಲ್ದಾರ್‌ ಮುನಿಕೃಷ್ಣಪ್ಪ, ಜೆ.ಎಸ್‌.ವೆಂಕಟಸ್ವಾಮಿ, ಗುರುರಾಜರಾವ್‌, ನಾರಾಯಣಸ್ವಾಮಿ ಇದ್ದರು.

ಕಾರ್ಯಕ್ರಮಕ್ಕೆ ಗೈರು

ಸರ್ಕಾರದ ಕಾರ್ಯಕ್ರಮವಾದ ವಿಶ್ವಮಾನವ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರು ಸೇರಿ 16 ಜನ ಚುನಾಯಿತ ಪ್ರತಿನಿಧಿಗಳ ಹೆಸರುಗಳು ಇದ್ದವು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಅವರನ್ನು ಹೊರತುಪಡಿಸಿ ಎಲ್ಲರೂ ಗೈರುಹಾಜರಾಗಿದ್ದರು. ರಾಷ್ಟ್ರಕವಿ ಕುವೆಂಪು ಬಗ್ಗೆ ಜನಪ್ರತಿನಿಗಳ ಅಸಡ್ಡೆಯನ್ನು ತೋರಿಸುತ್ತದೆ ಎಂಬುದು ಸ್ಥಳೀಯರು ಆರೋಪಿಸಿದರು.

ಇತರೆ ಜಯಂತಿಗಳಿಗೆ ತಾವೇ ಮುಂದೆ ನಿಂತು, ಮಾರ್ಗದರ್ಶನ ಮಾಡಿ ವೈಭವದಿಂದ ಆಚರಿಸುವ ಮುಖಂಡರು ವಿಶ್ವಮಾನವ ಜಯಂತಿ ಕಾರ್ಯಕ್ರಮಕ್ಕೆ ಒಬ್ಬರೂ ಮುಖ ಮಾಡದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು.

ವಿಶ್ವಮಾನವ ಮಟ್ಟಕ್ಕೆ ಬೆಳೆದ ಕುವೆಂಪು

ಚಿಂತಾಮಣಿ: ‘ಜಾತಿ ಧರ್ಮಗಳನ್ನು ಮೆಟ್ಟಿನಿಂತು ವಿಶ್ವಮಾನವ ಸಂದೇಶವನ್ನು ಸಾರಿದಾಗ ಮಾತ್ರ ರಸಋಷಿ ಕುವೆಂಪು ಜನ್ಮ ದಿನಾಚರಣೆ ಅರ್ಥಪೂರ್ಣವಾಗುತ್ತದೆ’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ಅಭಿಪ್ರಾಯಪಟ್ಟರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಮಾನವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

‘ಮನುಷ್ಯ ವಿಶ್ವಮಾನವನಾಗಿ ಜನಿಸಿ, ನಂತರ ಅಲ್ಪಮಾನವನಾಗಿ ಬೆಳೆಯುತ್ತಾನೆ, ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು ಎಂಬುದು ಕುವೆಂಪು ಆಶಯವಾಗಿತ್ತು’ ಎಂದರು. ‘ಮೌಢ್ಯವನ್ನು ದೂರಮಾಡಿ ವೈಚಾರಿಕ ಮನೋಭಾವನೆಯನ್ನು ಬೆಳೆಸಲು ಶ್ರಮಿಸಿದ ಮಹಾನ್‌ ವ್ಯಕ್ತಿ ಕುವೆಂಪು’ ಎಂದು ಬಣ್ಣಿಸಿದರು.

‘ಕುವೆಂಪು ಅವರ ವ್ಯಾಸಂಗ ಗೀಳು ಅವರನ್ನು ವಿಶ್ವಮಾನವ ಮಟ್ಟಕ್ಕೆ ಬೆಳೆಸಿತು. ಅವರ ಸಾಹಿತ್ಯ ಇಂದಿನ ಯುವಕರನ್ನು ಬಡಿದೆಬ್ಬಿಸುತ್ತದೆ. ಯುವಕರ ಮೇಲೆ ಪ್ರಭಾವ ಬೀರಿ ಅವರ ಮನಸ್ಸಿನಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತಿದ್ದಾರೆ. ಅವರ ವೈಚಾರಿಕತೆ ಇಂದಿಗೂ ಪ್ರಸ್ತುತವಾಗಿದೆ’ ಎಂದರು.

‘ಮನುಷ್ಯನಲ್ಲಿರುವ ಮೌಢ್ಯ ದೂರವಾದಾಗ ವಿಶ್ವಮಾನವನಾಗಲು ಸಹಕಾರಿಯಾಗುತ್ತದೆ. ಪುರೋಹಿತಶಾಹಿಯಿಂದ ಹೊರಬರಬೇಕು. ಹಿಂದಿನದನ್ನು ಹಾಗೂ ಮುಂದಿನದನ್ನು ಯೋಚಿಸದೆ ಅಂದಿನ ಕೆಲಸವನ್ನು ಅಂದೇ ಮಾಡಬೇಕು ಎಂಬುದು ಅವರ ಸಂದೇಶ’ ಎಂದರು.

‘ಆಡಂಬರದ ಮೌಢ್ಯಗಳನ್ನು ಕುಂವೆಂಪು ಇಷ್ಟಪಡುತ್ತಿರಲಿಲ್ಲ. ರಾಮಕೃಷ್ಣಮಠ, ಸ್ವಾಮಿ ವಿವೇಕಾನಂದ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು’ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನರಸಿಂಹಪ್ಪ, ಚಂದ್ರಶೇಖರ್‌ ತಂಡದಿಂದ ನಾಡಗೀತೆ, ಮುನಿರೆಡ್ಡಿ ತಂಡದಿಂದ ರೈತಗೀತೆ ಗಾಯನ ನಡೆಯಿತು. ಆರಂಭದಲ್ಲಿ ಕುವೆಂಪು ಭಾವಚಿತ್ರದೊದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ಪ್ರಭಾರಿ ತಹಶೀಲ್ದಾರ್‌ ಅಣ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್‌ ಖಲೀಲ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್‌, ಸಹಾಯಕ ನಿರ್ದೇಶಕ ಚಲಪತಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿ ವೆಂಕಟರವಣಪ್ಪ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದುನಾರಾಯಣಸ್ವಾಮಿ, ಶಿರಸ್ಥೆದಾರ್‌ ಆಂಜನಪ್ಪ, ಮುಖಂಡ ವರದರಾಜ್‌, ಶಿಕ್ಷಕರಾದ ಚಂದ್ರಶೇಖರ್‌, ಸುಬ್ರಮಣಿ, ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಜನಪದ ಕಲಾವಿದ ಮುನಿರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.