ADVERTISEMENT

ಮಾತಿಗೆ ಬದ್ಧರಾಗಿರಲು ಸಿಎಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 6:05 IST
Last Updated 20 ಜನವರಿ 2012, 6:05 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು. ಶಾಶ್ವತ ನೀರಾವರಿಗೆ ಸಂಬಂಧಿಸಿದಂತೆ ಜಿ.ಎಸ್.ಪರಮಶಿವಯ್ಯ ವರದಿಅನುಷ್ಠಾನಗೊಳಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ತುರ್ತು ಸಭೆ ನಡೆಸಿದ ರೈತ ಮುಖಂಡರು, `ಮುಖ್ಯಮಂತ್ರಿಯವರು ಸ್ಥಳ ಮತ್ತು ಸಮಯಕ್ಕೆ ಅನುಸಾರವಾಗಿ ತಮ್ಮ ಹೇಳಿಕೆಗಳನ್ನು ಬದಲಿಸಬಾರದು. ತಮ್ಮ ಹೇಳಿಕೆಗೆ ಬದ್ಧರಾಗಿರಬೇಕು. ಅನಗತ್ಯ ಗೊಂದಲ ಮೂಡಿಸಲು ಪ್ರಯತ್ನಿಸಬಾರದು~ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, `ಮುಖ್ಯಮಂತ್ರಿ ಹುದ್ದೆಯಲ್ಲಿರುವ ಡಿ.ವಿ.ಸದಾನಂದಗೌಡರು ಹುದ್ದೆಗೆ ಘನತೆ ತರುವಂತೆ ಮಾತನಾಡಬೇಕು. ಎಲ್ಲರನ್ನೂ ಸಮಾನರನ್ನಾಗಿ ಕಾಣಬೇಕು. ಬಯಲು ಸೀಮೆ ಬರಪೀಡಿತ ಜಿಲ್ಲೆಯ ರೈತರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು~ ಎಂದರು.

ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, `ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ಹರಿಸುವ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು ನೀಡುತ್ತಿರುವ ಹೇಳಿಕೆಗಳಲ್ಲಿ ಸಾಮ್ಯತೆ ಇಲ್ಲ. ಎತ್ತಿನಹೊಳೆ ಕುರಿತು ಪೂರ್ಣ ಪ್ರಮಾಣದ ಅಧ್ಯಯನ ಮಾಡದೇ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಕ್ಯಾತಪ್ಪ, ಪಟ್ರೇನಹಳ್ಳಿ ಮುನಿರಾಜು, ದೇವರಾಜ್, ಕೃಷ್ಣಪ್ಪ, ವೆಂಕಟರಾಮ, ಜೆ.ವೆಂಕಟಸ್ವಾಮಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.