ADVERTISEMENT

ಮಾ.15ರೊಳಗೆ ಪೂರ್ಣಗೊಳಿಸಿ: ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 6:45 IST
Last Updated 23 ಫೆಬ್ರುವರಿ 2012, 6:45 IST

ಬೆಂಗಳೂರು: ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿಗೆ `ವರ್ಕ್ ಆರ್ಡರ್~ ನೀಡಲು ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

`ಸಿಂಡಿಕೇಟ್ ಸಭೆಯಲ್ಲಿ ಮುಖ್ಯವಾಗಿ ಕೋಲಾರ ಸ್ನಾತಕೋತ್ತರ ಕೇಂದ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಲು ಒಮ್ಮತ ನಿರ್ಣಯ ಕೈಗೊಳ್ಳಲಾಯಿತು. ಇಲ್ಲಿನ ಆಡಳಿತ ವಿಭಾಗದ ಕಟ್ಟಡವನ್ನು ಮಾರ್ಚ್ 15ರೊಳಗೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು~ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸ್ಮಾರ್ಟ್ ಕಾರ್ಡ್ ನೀಡಲು ಒಪ್ಪಿಗೆ ಸಿಕ್ಕಿದೆ. ಸ್ಥಳೀಯ ಪರಿಶೀಲನಾ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಿಸುವ ಪ್ರಸ್ತಾವಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು~ ಎಂದು ಅವರು ಮಾಹಿತಿ ನೀಡಿದರು.

`ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಹನ್ನೊಂದು ಕೋಟಿ ರೂಪಾಯಿಗೆ ನೀಡಲಾಗಿತ್ತು. ಆದರೆ ಕಾಮಗಾರಿ ವಿಳಂಬ ಆಗಿರುವುದರಿಂದ 84 ಲಕ್ಷ ಹಣ ಹೆಚ್ಚುವರಿಯಾಗಿ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆದಾರರೂ ಇದಕ್ಕೆ ಒಪ್ಪಿಕೊಂಡಿದ್ದಾರೆ. ಕಾಮಗಾರಿ ವಿಳಂಬ ಆಗಿರುವುದಕ್ಕೆ ವಿ.ವಿಯ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲ ಸದಸ್ಯರು ಹೇಳಿದರು.

ಆದರೆ ಒಬ್ಬ ವ್ಯಕ್ತಿಯ ಮೇಲೆ ಎಲ್ಲ ಹೊಣೆ ಹೊರೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಪ್ರಸ್ತಾಪ ಕೈಬಿಡಲಾಯಿತು~ ಎಂದು ವಿ.ವಿ ಆಡಳಿತ ವಿಭಾಗದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಹೇಳಿದರು.

`ವಿದ್ಯಾರ್ಥಿನಿಲಯ 1 ಮತ್ತು 2ರಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಉಳಿದ ವಿದ್ಯಾರ್ಥಿನಿಲಯಗಳ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. ವಿ.ವಿಯ ಎಂಜಿನಿಯರಿಂಗ್ ವಿಭಾಗಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅಧೀಕ್ಷಕ ಎಂಜಿನಿಯರ್ ನೇಮಕ ಮಾಡಬೇಕು ಎಂದು ಕೆಲವರು ಹೇಳಿದರು.
 
ಅಧೀಕ್ಷಕ ಎಂಜಿನಿಯರ್ ಹುದ್ದೆ ವಿ.ವಿಯಲ್ಲಿ ಇಲ್ಲ. ಆದ್ದರಿಂದ ಇದಕ್ಕೆ ಒಪ್ಪಿಗೆ ಸಿಗಲಿಲ್ಲ. ವಿ.ವಿಯ 2.25 ಲಕ್ಷ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸ್ಮಾರ್ಟ್ ಕಾರ್ಡ್ ನೀಡಲು ಗುತ್ತಿಗೆ ಪಡೆದಿರುವ ಕಂಪೆನಿ ಆ ಬಗ್ಗೆ ಕೆಲವೇ ದಿನಗಳಲ್ಲಿ ಪ್ರಾಯೋಗಿಕ ಮಾಹಿತಿ (ಡೆಮೊ) ನೀಡಲಿದೆ~ ಎಂದು ಅವರು ಹೇಳಿದರು.

ವಿದ್ಯಾರ್ಥಿ ಪ್ರವೇಶ ಪಡೆಯುವುದರಿಂದ ಹಿಡಿದು ಕೋರ್ಸ್ ಪೂರ್ಣಗೊಳಿಸುವವರೆಗಿನ ಎಲ್ಲ ಮಾಹಿತಿ ಸ್ಮಾರ್ಟ್ ಕಾರ್ಡ್‌ನಲ್ಲಿ ಇರಲಿದೆ. ಮೂರು ವರ್ಷದ ಕೋರ್ಸ್ ವಿದ್ಯಾರ್ಥಿಗಳಿಗೆ ನೀಡುವ ಸ್ಮಾರ್ಟ್ ಕಾರ್ಡ್ ಆರು ವರ್ಷಗಳ ಗಡುವು ಹೊಂದಿರಲಿದೆ. ಅದೇ ರೀತಿ ಐದು ವರ್ಷದ ಕೋರ್ಸ್ ಇದ್ದರೆ ಹತ್ತು ವರ್ಷದ ಗಡುವು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.