ADVERTISEMENT

ಮಿನಿವಿಧಾನಸೌಧ: 2.5 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 9:20 IST
Last Updated 12 ಮಾರ್ಚ್ 2012, 9:20 IST

ಚಿಂತಾಮಣಿ:  ಮಿನಿ ವಿಧಾನಸೌಧ ಕಟ್ಟಡದ ಮೇಲೆ ಒಂದು ಮತ್ತು ಎರಡನೇ ಮಹಡಿ ನಿರ್ಮಿಸಲು 2.5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಇಲ್ಲಿ ಈಚೆಗೆ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾ.ಪಂ. ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಾಗಿದ್ದ ನಗರದಲ್ಲಿ ಪ್ರಥಮವಾಗಿ ಮಾಜಿ ಮಂತ್ರಿ ಚೌಡರೆಡ್ಡಿ ಮಿನಿ ವಿಧಾನಸೌಧ ನಿರ್ಮಿಸಿದ್ದರು. ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಕಚೇರಿ, ಉಪಖಜಾನೆ, ಉಪ ನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸ್ಥಳಾವಕಾಶಕ್ಕೆ ತೊಂದರೆಯಾಗಿದೆ ಎಂದರು.

ಮಿನಿ ವಿಧಾನಸೌಧದ ಮೇಲೆ ಮಹಡಿಯನ್ನು ನಿರ್ಮಾಣ ಮಾಡಲು ಕಳೆದ 2-3 ವರ್ಷಗಳಿಂದ ಸತತವಾಗಿ ಪ್ರಯತ್ನಿಸಿದ್ದೆ ಎಂದು 2.5 ಕೋಟಿ ರೂಪಾಯಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಸರ್ಕಾರದ ಆದೇಶ ಪ್ರತಿಯನ್ನು ಮಾಧ್ಯಮಕ್ಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣ, ಝಾನ್ಸಿ ಕ್ರೀಡಾಂಗಣ, ರಸ್ತೆಗಳು, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳ ನಿರ್ಮಾಣ ಸೇರಿದಂತೆ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ವಿನ್ಯಾಸಗಳನ್ನು ಅಳವಡಿಸುತ್ತಿದ್ದು, ಹೈಟೆಕ್ ಸ್ಪರ್ಶ ನೀಡಿ ಅತ್ಯಾಧುನಿಕ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಇತ್ತೀಚೆಗೆ ನಗರದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕರು, ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸುತ್ತಿರುವುದಾಗಿ ನುಡಿದರು.

ತಹಶೀಲ್ದಾರ್ ಕೃಷ್ಣಮೂರ್ತಿ, ಸಮ್ಮೇಳನಾಧ್ಯಕ್ಷ ಶಿವಪ್ರಸಾದ್ ಮಾತನಾಡಿದರು. ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ  ಮುನಿಕೃಷ್ಣಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು, ಆರ್.ವೆಂಕಟರಮಣಾರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ನರಸಿಂಹಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.