ADVERTISEMENT

ಮುಜುಗರಕ್ಕೀಡು ಮಾಡಿದ ಶಾಸಕರ ಅನುವಾದ

ರಾಹುಲ್ ಭಾಷಣದುದ್ದಕ್ಕೂ ತಪ್ಪು ತಪ್ಪಾಗಿ ಅನುವಾದ ಮಾಡಿದ ಶಿವಶಂಕರರೆಡ್ಡಿ, ಪದೇ ಪದೇ ಮೆಲುಧ್ವನಿಯಲ್ಲಿ ಅನುವಾದ ಸರಿಪಡಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 9 ಮೇ 2018, 9:11 IST
Last Updated 9 ಮೇ 2018, 9:11 IST
ಗೌರಿಬಿದನೂರಿನ ಎಂ.ಜಿ.ವೃತ್ತದಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಭಾಷಣ ಅನುವಾದಿಸಿದ ಶಿವಶಂಕರರೆಡ್ಡಿ
ಗೌರಿಬಿದನೂರಿನ ಎಂ.ಜಿ.ವೃತ್ತದಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಭಾಷಣ ಅನುವಾದಿಸಿದ ಶಿವಶಂಕರರೆಡ್ಡಿ   

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದ್ದನ್ನು ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಅವರು ತಪ್ಪು ತಪ್ಪಾಗಿ ಅನುವಾದಿಸುವ ಮೂಲಕ ಭಾಷಣದುದ್ದಕ್ಕೂ ಸಭೀಕರಲ್ಲಿ ನಗೆ ಮೂಡಿಸಿ, ಮುಖಂಡರನ್ನು ಮುಜುಗರಕ್ಕೀಡು ಮಾಡಿದರು.

ಭಾಷಣದ ಆರಂಭದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಅನುವಾದ ಮಾಡುವುದಕ್ಕಾಗಿ ಮೈಕ್ ಕೈಗೆತ್ತಿಕೊಂಡರು. ಆದರೆ ರಾಹುಲ್ ಅವರೇ ಶಿವಶಂಕರರೆಡ್ಡಿ ಅವರಿಗೆ ಅನುವಾದ ಮಾಡುವಂತೆ ಹೇಳಿದರು.

ಶಿವಶಂಕರರೆಡ್ಡಿ ಅವರು ಅನುವಾದದ ವೇಳೆ ರಾಹುಲ್ ಅವರ ಹೇಳಿದ್ದಕ್ಕಿಂತಲೂ ತುಸು ಹೆಚ್ಚಾಗಿಯೇ ತಮ್ಮದೇ ಆದ ‘ಮಸಾಲೆ’ ಬೆರೆಸಿ ಹೇಳಿದರು. ಅನೇಕ ಬಾರಿ ಅವರ ತಪ್ಪುಗಳನ್ನು ಪಕ್ಕದಲ್ಲಿಯೇ ನಿಂತಿದ್ದ ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಅನೇಕ ಮುಖಂಡರು ಮೆಲುಧ್ವನಿಯಲ್ಲಿ ತಿದ್ದಿ ಹೇಳಿಕೊಟ್ಟರು. ಶಾಸಕರು ರಾಹುಲ್ ಭಾಷಣ ಅನುವಾದ ಮಾಡಿದ ಪರಿ ಈ ರೀತಿಯಿದೆ..

ADVERTISEMENT

ರಾಹುಲ್: ಮಾಧ್ಯಮ ಮಿತ್ರರಿಗೆ ಸಹ ಸ್ವಾಗತಿಸುತ್ತೇನೆ
ಶಿವಶಂಕರರೆಡ್ಡಿ: ಇಲ್ಲಿ ಬಂದಿರುವ ಕಾಂಗ್ರೆಸ್ ಪಕ್ಷದ ಬಂಧುಗಳಿಗೆ ಸ್ವಾಗತಿಸುತ್ತೇನೆ.

ರಾ: ಮೋದಿ ಅವರು 15 ಉದ್ಯಮಿಗಳ ₨2.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ.
ಶಿ: ಮೋದಿ ಅವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₨15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಒಬ್ಬರಿಗೂ ಒಂದು ರೂಪಾಯಿ ಹಾಕಲಿಲ್ಲ.

ರಾ: ಹಣವಂತರಿಗೆ, ಖಾಸಗಿ ವಿಮಾನವುಳ್ಳವರಿಗೆ, ಲಕ್ಷಗಟ್ಟಲೆ ಬೆಲೆ ಬಾಳುವ ಸೂಟ್ ಧರಿಸುವವರಿಗೆ ಪ್ರಧಾನಿ ಬಾಗಿಲು ತೆಗೆದಿರುತ್ತದೆ.
ಶಿ: ಸೂಟುಬೂಟು ಹಾಕಿದವರಿಗೆ, ಕೈಯಲ್ಲಿ ಸೂಟ್‌ಕೇಸ್ ಹಿಡಿದುಕೊಂಡವರಿಗೆ ಪ್ರಧಾನಮಂತ್ರಿ ಬಾಗಿಲು ತೆರೆದಿರುತ್ತದೆ.

ರಾಃ ದೇಶದಲ್ಲಿ ಕೋಟಿಗಟ್ಟಲೇ ರೈತರು ಒಟ್ಟಾಗಿ 24 ಗಂಟೆ ಧ್ವನಿ ಮೊಳಗಿಸಿದರೂ ಪ್ರಧಾನಮಂತ್ರಿಯವರಿಗೆ ಅದು ಕೇಳುವುದೇ ಇಲ್ಲ.
ಶಿ: ಭಾರತದಲ್ಲಿ ಬಡವರು, ರೈತರು ಮನಸು ಮಾಡಿದ್ದೇ ಆದಲಿ, 24 ಗಂಟೆ ಒಳಗಡೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಲು ಸಾಧ್ಯವಾಗುತ್ತದೆ.

ರಾಃ ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ.
ಶಿ: ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ರೈತರಿಗೆ ಒಂದು ರೂಪಾಯಿ ಅನುಕೂಲವಾಗುವ ಕಾರ್ಯಕ್ರಮ ಬಿಜೆಪಿ ಸರ್ಕಾರ ನೀಡಿಲ್ಲ.

ರಾಃ ನಾನು ಕರ್ನಾಟಕದ ರೈತರ ಸಾಲ ಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರ ಜತೆ ಚರ್ಚಿಸಿದ 10 ದಿನಗಳ ಒಳಗಡೆ ರಾಜ್ಯದ ರೈತರ ₨8,000 ಕೋಟಿ ಸಾಲ ಮನ್ನಾ ಮಾಡಿದರು.
ಶಿ: ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರು ರಾಜ್ಯದ ಪರವಾಗಿ ಹೋಗಿ ಸಾಲ ಮನ್ನಾ ಮಾಡಬೇಕು ಎಂದು ಹೇಳಿದರು. ಮಾಡಲಿಲ್ಲ. ಆದರೆ ರಾಹುಲ್ ಅವರು ಹೇಳಿದ ತಕ್ಷಣ ಕರ್ನಾಟಕದಲ್ಲಿ 24 ಗಂಟೆಗಳಲ್ಲಿ ರೈತರ ₨8000 ಕೋಟಿ ಸಾಲ ಮನ್ನಾ ಮಾಡಿದ್ದೇವೆ.

ರಾ: ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹಸಿವಿನಿಂದ ಬಳಲುವವರು ಇರಬಾರದು ಎಂದು ನಾವು ಈ ಹಿಂದೆ ನೀಡಿದ್ದ ಆಶ್ವಾಸನೆ ಈಡೇರಿಸಿದ್ದೇವೆ.
ಶಿ: ಐದು ವರ್ಷಗಳ ಹಿಂದೆ ಯಾವುದೇ ರೈತರಿಗೆ ಅನುಕೂಲ ಮಾಡಿರಲಿಲ್ಲ.

ರಾಃ ಇಂದಿರಾ ಕ್ಯಾಂಟಿನ್ ಮೂಲಕ ಬಡವರ ಹೊಟ್ಟೆ ತುಂಬಿಸಲು ಕಡಿಮೆ ಬೆಲೆಯಲ್ಲಿ ಊಟ, ಉಪಾಹಾರ ನೀಡುತ್ತಿದ್ದೇವೆ.
ಶಿ: ಬಡವರ ಹೊಟ್ಟೆ ನೀಗಿಸಲು ಕಡಿಮೆ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ತೆರೆದಿದ್ದೇವೆ.

ರಾಃ ರೈತರಿಗೆ ಎರಡು ಲಕ್ಷ ಕೃಷಿ ಹೊಂಡಗಳನ್ನು ಅಭಿವೃದ್ಧಿ ಮಾಡಿದ್ದೇವೆ.
ಶಿ: ರೈತರಿಗೆ ಎರಡು ಲಕ್ಷ ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇವೆ.

ರಾಃ ನೀರಾವರಿ ಯೋಜನೆಗಳಿಗಾಗಿ ಬಿಜೆಪಿಯವರಿಗಿಂತ ಮೂರುಪಟ್ಟು ಹಣವನ್ನು ಕಾಂಗ್ರೆಸ್ ಪಕ್ಷದ ಸರ್ಕಾರ ನೀಡಿದೆ.
ಶಿ: ಕುಡಿಯುವ ನೀರಿಗೆ ಬಿಜೆಪಿಗಿಂತ ಮೂರು ಪಟ್ಟು ಕಾಂಗ್ರೆಸ್ ಹಣ ವ್ಯಯಮಾಡಿದೆ.

ರಾಃ ಶೋಲೆ ಚಿತ್ರ ಮತ್ತೆ ಬಂದಿದೆ. ನಿಮಗೆ ನೆನಪಿದೆಯೇ? ಅದರಲ್ಲಿರುವ ಗಬ್ಬರ್ ಸಿಂಗ್, ಕಾಲಿಯಾ, ಸಾಂಬಾ, ಇದೀಗ ಮೋದಿ ಅವರು ಈ ಶೋಲೆವಾಲೆ ಗುಂಪನ್ನು ಕರ್ನಾಟಕ ಚುನಾವಣೆಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಶಿ: ಗಬ್ಬರ್ ಸಿಂಗ್ ರೀತಿ ಬಡವರ ಮೇಲೆ ಜಿಎಸ್‌ಟಿ ಹಾಕಿದ್ದಾರೆ.

ರಾಃ ಮುಂಬರುವ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮನೆ ಇಲ್ಲದ ಒಬ್ಬೇ ವ್ಯಕ್ತಿ ನೋಡಲು ಸಿಗಬಾರದು.
ಶಿ: ಬರುವ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಮನೆಯಿಲ್ಲದ ಬಡವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆಗಳನ್ನು ಕಟ್ಟಿಸಿ ಕೊಡುತ್ತೇವೆ.

ರಾ: ಹಣವಂತರಿಗೆ, ಖಾಸಗಿ ವಿಮಾನವುಳ್ಳವರಿಗೆ, ಲಕ್ಷಗಟ್ಟಲೆ ಬೆಲೆ ಬಾಳುವ ಸೂಟ್ ಧರಿಸುವವರಿಗೆ ಪ್ರಧಾನಿ ಬಾಗಿಲು ತೆಗೆದಿರುತ್ತದೆ.
ಶಿ: ಸೂಟುಬೂಟು ಹಾಕಿದವರಿಗೆ, ಕೈಯಲ್ಲಿ ಸೂಟ್‌ಕೇಸ್ ಹಿಡಿದುಕೊಂಡವರಿಗೆ ಪ್ರಧಾನಮಂತ್ರಿ ಬಾಗಿಲು ತೆರೆದಿರುತ್ತದೆ.

ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ಕೊನೆಯಲ್ಲಿ ‘ಐದು ವರ್ಷಗಳಲ್ಲಿ ನಾವು ರಾಜ್ಯದ ಯುವಜನರಿಗೆ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ’ ಎಂದರು. ಆದರೆ ಶಿವಶಂಕರರೆಡ್ಡಿ ಅವರು ‘ಮುಂದಿನ ಐದು ವರ್ಷಗಳಲ್ಲಿ ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ’ ಎನ್ನುತ್ತಿದ್ದಂತೆ ರಾಹುಲ್ ಅವರು, ‘ನಯ್, ನಯ್ ಪಾಂಚ್ ಸಾಲ್ ಮೆ’ ಎಂದು ತಪ್ಪನ್ನು ಸರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.