ADVERTISEMENT

ಮೂರು ಯೋಜನೆಗಳಿದ್ದರೂ ಎಲ್ಲವೂ ಅಸ್ಪಷ್ಟ!

ರಾಜ್ಯ ಸರ್ಕಾರದಿಂದ ದೊರೆಯದ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2013, 6:12 IST
Last Updated 25 ಡಿಸೆಂಬರ್ 2013, 6:12 IST

ಚಿಕ್ಕಬಳ್ಳಾಪುರ: ಬರಪೀಡಿತ ಬಯಲು­ಸೀಮೆ ಪ್ರದೇಶಗಳೆಂದೇ ಪರಿಗಣಿಸಲ್ಪ­aಬಳ್ಳಾಪುರ, ಕೋಲಾರ ಮತ್ತು ಇತರ ಜಿಲ್ಲೆಗಳಿಗೆ ನೀರಾವರಿ ಯೋಜನೆ ಜಾರಿಗೊಳಿಸುವ ಬಗ್ಗೆ ವರ್ಷ­ಗಳಿಂದ ಭರವಸೆಗಳ ಹೊಳೆ ಹರಿಯು­ತ್ತಿದೆ­ಯಾದರೂ ಯೋಜನೆ ಅನುಷ್ಠಾನ­ಗೊಳ್ಳುವ ಬಗ್ಗೆ ಅಸ್ಪಷ್ಟತೆ ಮುಂದು­ವರೆದಿದೆ.

ರಾಜ್ಯ ಸರ್ಕಾರದ ಎದುರು ಸದ್ಯಕ್ಕೆ ಮೂರು ನೀರಾವರಿ ಯೋಜನೆಗಳ ಪ್ರಸ್ತಾವನೆಯಿದ್ದು, ಒಂದನ್ನು ಕೈಬಿಡುವ ಬಗ್ಗೆ ಪರಿಶೀಲನೆ ನಡೆದಿದೆ. ಇನ್ನೆರಡು ಯೋಜನೆಗಳ ಬಗ್ಗೆ ಒಂದೆಡೆ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿ­ದ್ದರೆ, ಮತ್ತೊಂದೆಡೆ ಅವುಗಳ ಅಧ್ಯ­ಯನ ವರದಿ ಕಾರ್ಯಕ್ಕೆ ಹಿನ್ನಡೆ­ಯಾಗು­ತ್ತಿದ್ದು, ಮೂರು ಯೋಜನೆಗಳ ಪೈಕಿ ಒಂದರ ಅನುಷ್ಠಾನದ ಬಗ್ಗೆಯೂ ನಿಖರ ಭರವಸೆ ದೊರೆಯದೆ ಇರುವುದು ಜನರ, ಶಾಶ್ವತ ನೀರಾವರಿ ಹೋರಾಟಗಾರರ ಆತಂಕ ಹೆಚ್ಚಿಸಿದೆ.

ನೀರಾವರಿ ತಜ್ಞ ಜಿ.ಎಸ್‌.­ಪರಮಶಿವಯ್ಯ ವರದಿಯಾಧರಿತ ಶಾಶ್ವತ ನೀರಾವರಿ ಯೋಜನೆಯು ಮೂರು ದಶಕಗಳಿಂದ ಆಶಾಭಾವನೆ ಮೂಡಿಸುತ್ತಾದರೂ ಮಾಲಾ ಕಾಲುವೆ ಕೊರೆಯುವುದು ಕಷ್ಟಕರ ಎಂಬ ಕಾರಣಕ್ಕೆ ಯೋಜನೆ ಕೈಬಿಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಪ್ರಬಲ ಲಾಬಿಯಿದ್ದರೂ ಎತ್ತಿನಹೊಳೆ ಸುತ್ತಮುತ್ತಲ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಮತ್ತು ಈ ಯೋಜನೆಯಲ್ಲಿ ತಾಂತ್ರಿಕ ದೋಷ­ಗಳಿರುವ ಬಗ್ಗೆ ತಜ್ಞರು ಅಭಿಪ್ರಾಯ-­ಪಟ್ಟಿದ್ದಾರೆ.

ಲಂಡನ್ ವೈದ್ಯ ಡಾ. ಮಧುಸೀತಪ್ಪ ವರದಿಯಾಧಾರಿತ ಶರಾವತಿ–ಅಘನಾಶಿನಿ ಯೋಜನೆ­ಯಿದೆಯಾದರೂ ಅದರ ಅಧ್ಯಯನ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿಲ್ಲ.

ಬಯಲುಸೀಮೆ ಬರಪೀಡಿತ ಜಿಲ್ಲೆ­ಗಳ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನವೆಂಬರ್‌ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆ­ಯಲ್ಲಿ ಪರಮಶಿವಯ್ಯ ವರದಿಯಾಧಾ­ರಿತ ಯೋಜನೆ ಡಿಸೆಂಬರ್‌ ಅಂತ್ಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವ, ಎತ್ತಿನಹೊಳೆ ಯೋಜನೆ ಜಾರಿಗೊಳಿ­ಸುವ ಮತ್ತು ಡಾ. ಮಧುಸೀತಪ್ಪ ವರದಿಯಾಧಾರಿತ ಶರಾವತಿ–ಅಘನಾಶಿನಿ ಯೋಜನೆಯ ಅಧ್ಯಯನಕ್ಕೆ ಚಾಲನೆ ಕೊಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.

ಪರಮಶಿವಯ್ಯ ವರದಿ: ಇದರ ಮಧ್ಯೆ ನವೆಂಬರ್‌ 25ರಂದು ಸಭೆ ಸೇರಿದ ಜಿ.ಎಸ್.ಪರಮಶಿವಯ್ಯ ನೇತೃತ್ವದ ತಜ್ಞರ ಸಮಿತಿಯು ಪರಮಶಿವಯ್ಯ ಯೋಜನಾ ವರದಿ, ಯುಆರ್‌ಎಸ್‌ ಸ್ಕಾಟ್ ವಿಲ್ಸನ್‌ ಸಂಸ್ಥೆ ವರದಿ, ಸಮಿತಿ ಸದಸ್ಯರ ಸ್ಥಳ ಪರಿಶೀಲನಾ ವರದಿ ಸರ್ಕಾರಕ್ಕೆ ನೀಡಿದೆ. ಯೋಜನೆ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಪಡಿಸಿದೆ.

‘ಪರಮಶಿವಯ್ಯ ವರದಿಯಲ್ಲಿ ತಿಳಿಸಿ­ರುವಂತೆ ಪಶ್ಚಿಮ ಘಟ್ಟಗಳ ಪಶ್ಚಿಮ ಇಳಿಜಾರಿನಲ್ಲಿ 900 ಮೀಟರ್‌ಗಳ ಎತ್ತರದಲ್ಲಿ ಕೊಡಗಿನಿಂದ ಆಗುಂಬೆ­ಯವರಗೆ 650 ಕಿ..ಮೀ.ಉದ್ದನೆಯ ಮಾಲಾ ಕಾಲುವೆ ನಿರ್ಮಿಸಲು ಸಾಧ್ಯವಾಗದು. ಇದರ ಹಿನ್ನೆಲೆಯಲ್ಲಿ ಇಳಿಜಾರಿನ ಕೆಲ ಸ್ಥಳಗಳಲ್ಲಿ 5 ರಿಂದ 10 ಕಿ.ಮೀ.ಗಳ ಟನೆಲ್‌ ಮತ್ತು ಫನೆಲ್‌ಗಳನ್ನು 900 ಮೀಟರ್‌ಗಳ ಎತ್ತರದಲ್ಲಿ ನಿರ್ಮಿಸಿ 5 ರಿಂದ 10 ಟಿಎಂಸಿ ನೀರನ್ನು ಪೂರ್ವಕ್ಕೆ ತಿರುಗಿಸ­ಬಹುದು ಇದಕ್ಕಾಗಿ ಕೊಡಗಿನ ಕಾಕ್ಕತ್ತು ಮತ್ತು ಕೊಂಗನಹೊಳೆ, ಪುಷ್ಪಗಿರಿ ಪರ್ವತ ಮತ್ತು ಸೀತಾಹೊಳೆ ಎಂಬ ಮೂರು ಸ್ಥಳಗಳನ್ನು ಗುರುತಿಸ­ಲಾಗಿದೆ. ಕಾಕ್ಕತ್ತು ಮತ್ತು ಕೊಂಗನ­ಹೊಳೆಯಿಂದ ನೀರನ್ನು ಕೆಆರ್‌ಎಸ್‌ ಸರೋವರಕ್ಕೆ, ಪುಷ್ಪಗಿರಿಯಿಂದ ಹೇಮಾವತಿ ಜಲಾ­ಶಯಕ್ಕೆ ಮತ್ತು ಸೀತಾಹೊಳೆಯ ನೀರನ್ನು ವಾಣಿವಿಲಾಸ ಸಾಗರ ಜಲಾ­ಶಯಕ್ಕೆ ತಲಾ 5 ರಿಂದ 10 ಟಿಎಂಸಿ­ಯಷ್ಟು ನೀರನ್ನು ಪೂರ್ವಕ್ಕೆ ತಿರುಗಿಸ­ಬಹುದು. ಈ ಮೂರು ಸ್ಥಳಗಳಲ್ಲಿ ಯಾವುದಾದರೂ ಒಂದು ಸ್ಥಳವನ್ನು ಪೈಲೆಟ್‌ ಯೋಜನೆಗೆ ಆಯ್ಕೆ ಮಾಡ­ಬಹುದು. ಫೆನೆಲ್ ಮತ್ತು ಟನೆಲ್‌ ಯೋಜನೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡಬಹುದು’ ಎಂದು ತಜ್ಞರೊಬ್ಬರು ಹೇಳುತ್ತಾರೆ.

ಎತ್ತಿನಹೊಳೆ ಯೋಜನೆ: ಎತ್ತಿನಹೊಳೆ ಯೋಜನೆಯಲ್ಲಿ ಕೆಲವು ಗೊಂದಲಗಳಿದ್ದು, ಈ ಯೋಜನೆ­ಯಡಿ 10 ಟಿಎಂಸಿಗಿಂತ ಹೆಚ್ಚು ನೀರನ್ನು ಪೂರ್ವಕ್ಕೆ ಸಾಗಿಸ­ಲಾಗುವುದಿಲ್ಲ. ಇದಲ್ಲದೇ 2 ಟಿಎಂಸಿ­ಗಿಂತ ಹೆಚ್ಚು ನೀರು ಅಥವಾ 25 ಮೆಗಾವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಬೇಕಾಗುವುದರಿಂದ ಪರಿಸರದ ಮೇಲಾ­ಗುವ  ಪರಿಣಾಮಗಳ ಅಂದಾಜು ಮಾಡು­ವಂತೆ ಕೇಂದ್ರ ಪರಿಸರ ಇಲಾಖೆಯ ಸ್ಪಷ್ಟ ಸೂಚನೆಯಿದೆ ಎಂಬ ಮಾತು ಕೇಳಿ ಬರುತ್ತಿದೆ.

ಎತ್ತಿನಹೊಳೆ ಯೋಜನೆಗೆ ಶೀಘ್ರವೇ ಶಂಕು ಸ್ಥಾಪನೆ ನೆರವೇರಿಸಲಾಗುವುದೆಂದು ಚಿಕ್ಕಬಳ್ಳಾ­ಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭರವಸೆ ನೀಡುತ್ತಿದ್ದಾರೆ. ಜನವರಿ ವೇಳೆಗೆ ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ರಾಜ್ಯ ಸರ್ಕಾರವು ಆಶಾ­ಭಾವನೆ ವ್ಯಕ್ತಪಡಿಸಿದೆಯಾದರೂ ಎಲ್ಲವೂ ಅಸ್ಪಷ್ಟವಾಗಿಯೇ ಉಳಿದು­ಕೊಂಡಿದೆ’ ಎನ್ನುತ್ತಾರೆ ನೀರಾವರಿ ಹೋರಾಟ ಸಮಿತಿಯ ಮುಖಂಡರೊಬ್ಬರು.

ಶರಾವತಿ–ಅಘನಾಶಿನಿ ಯೋಜನೆ: ಡಾ. ಮಧುಸೀತಪ್ಪ ವರದಿಯಾಧಾ­ರಿತ ಶರಾವತಿ–ಅಘನಾಶಿನಿ ಯೋಜ­ನೆಯ ಬಗ್ಗೆ ಪರಿಶೀಲಿಸಿ ಸಮಗ್ರ ಅಧ್ಯ­ಯನ ವರದಿ ನೀಡುವಂತೆ ಜಲಸಂಪ­ನ್ಮೂಲ ಇಲಾಖೆ ಮತ್ತು ಇಂಧನ ಇಲಾಖೆಯ ಮೂಲಕ ಸೆಪ್ಟೆಂಬರ್‌ 13ರಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತಕ್ಕೆ ಸೂಚಿಸಲಾಗಿದ್ದರೂ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆಯ ಅಧ್ಯಯನ ವರದಿ ಸಿದ್ಧಪಡಿಸುವಿಕೆ ಕಾರ್ಯ ಕಷ್ಟ ಸಾಧ್ಯ ಎಂಬ ಅರ್ಥದಲ್ಲಿ ನವೆಂಬರ್‌ 23ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರದ ಮೂಲಕ ತಿಳಿಸಿದ್ದಾರೆ.

ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ನಿಗಮವು ವಿದ್ಯುತ್ ಉತ್ಪಾ­ದನಾ ಕ್ಷೇತ್ರದಲ್ಲಿ ಮಾತ್ರವೇ ಕಾರ್ಯ­ನಿರ್ವಹಿಸುತ್ತದೆ. ಜಲವಿದ್ಯುತ್‌ ಯೋಜನೆ­­ಗಳಿಗೆ ಸಂಬಂಧಿಸಿದ ಅನ್ವೇಷನಾ ಕಾರ್ಯ ಹೊರತುಪಡಿಸಿ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳಲ್ಲಿ ತಾಂತ್ರಿಕ ಪರಿಣಿತಿ ಹೊಂದಿಲ್ಲ. ಈಗಾಗಲೇ ಅನ್ವೇಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿ ನಿವೃತ್ತಿ­ಯಾಗಿದ್ದು, ವಿಭಾಗೀಯ ಕಚೇರಿಗಳನ್ನು ಮುಚ್ಚ­ಲಾಗಿದೆ. ನಿಗಮವು ತಾಂತ್ರಿಕ ಸಿಬ್ಬಂದಿಯ ಕೊರತೆಯೂ ಎದುರಿಸು­ತ್ತಿದೆ. ಯೋಜನೆಯ ಅಧ್ಯಯನ ವರದಿ­ಯನ್ನು ನೀರಾವರಿ ಇಲಾಖೆ ಅಥವಾ ಹೊರಗಿನ ಸಂಸ್ಥೆಯಿಂದ ನಡೆಸುವುದು ಸೂಕ್ತ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT