ADVERTISEMENT

ಯುಪಿಎ ಆರ್ಥಿಕ ನೀತಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:58 IST
Last Updated 19 ಮಾರ್ಚ್ 2014, 6:58 IST

ಗೌರಿಬಿದನೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ನೀತಿಯಿಂದ ಜನಸಾಮಾ­ನ್ಯರ ಬದುಕು ಜರ್ಜರಿತವಾಗಿದೆ ಎಂದು ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮ­ರೆಡ್ಡಿ ಹೇಳಿದರು.

ಪಟ್ಟಣದ ನದಿ ದಡದ ಆಂಜನೇಯ­ಸ್ವಾಮಿ ದೇಗುಲದ ಆವರಣದಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾ­ರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿವೆ ಎಂದರು.

ದೇಶದಲ್ಲಿ 40 ಕೋಟಿ ಜನರಿಗೆ ವಸತಿಯಿಲ್ಲ. 70 ಕೋಟಿ ಕುಟುಂಬಕ್ಕೆ ಸ್ನಾನ ಗೃಹ, ಶೌಚಾ­ಲಯಗಳಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಪರ ಯೋಚಿಸುತ್ತಿ­ರುವ ಸರ್ಕಾರಗಳು ರೈತರ ಮತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇ­ರಿ­ಸುವಲ್ಲಿ ನಿರಾಸಕ್ತ ಹೊಂದಿವೆ ಎಂದು ಟೀಕಿಸಿದರು.

ಎತ್ತಿನ ಹೊಳೆ ಯೋಜನೆ­ಯಿಂದ ಬಯಲು ಸೀಮೆ ಜಿಲ್ಲೆ­ಗಳಿಗೆ ನೀರು ದೊರಕುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇತರ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರು, ರೈತರ ಬಗ್ಗೆ ಮಾತನಾಡುತ್ತಾರೆ ಎಂದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿದ್ದಗಂಗಪ್ಪ, ತಾಲ್ಲೂಕು ಘಟಕದ ಕಾರ್ಯದರ್ಶಿ ಸಿ.ಸಿ.ಅಶ್ವತ್ಥಪ್ಪ, ಸಿಐಟಿಯು ಪ್ರಧಾನ ಕಾರ್ಯ­ದರ್ಶಿ ವರಲಕ್ಷ್ಮೀ, ಪಕ್ಷದ ಮುಖಂಡ­ರಾದ ರವಿಚಂದ್ರರೆಡ್ಡಿ, ಎಸ್.ಎಸ್.ರೆಡ್ಡಿ, ಅನ್ವರ್ ಬಾಷಾ, ಆನೂಡಿ ನಾಗರಾಜ್, ನಲ್ಲಪ್ಪ, ರಾಜು ಮತ್ತಿತರರಿದ್ದರು.

ಸಂಸದೀಯ ವ್ಯವಸ್ಥೆಗೆ ಅವಮಾನ: ಖಂಡನೆ

ಗುಡಿಬಂಡೆ ವರದಿ: ಸಂಸದೀಯ ವ್ಯವಸ್ಥೆಗೆ ಅವಮಾನ ಮಾಡುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಮಾಡುತ್ತಿರುವುದನ್ನು ಸಿಪಿಎಂ ನಿಯೋಜಿತ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಖಂಡಿಸಿದರು.

ADVERTISEMENT

ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಮಂಗಳವಾರ ಸಿಪಿಎಂ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಮಾತನಾಡಿ, ಈ ದೇಶದ ಸಾರ್ವಭೌಮತ್ವವನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಬಹುರಾಷ್ಟ್ರಿಯ ಕಂಪೆನಿಗಳಿಗೆ ಒತ್ತೆ ಇಟ್ಟಿವೆ. ವೀರಪ್ಪ ಮೊಯಿಲಿಯಂಥ ಕಾರ್ಪೊರೇಟ್ ದಲ್ಲಾಳಿಯನ್ನು ನಮ್ಮ ಸಂಸದ ಎಂದು ಹೇಳಿಕೊಳ್ಳುವ ದೌರ್ಭಾಗ್ಯ ಕ್ಷೇತ್ರದ ಜನತೆಗೆ ಬಾರದಿರಲಿ ಎಂದರು.

ಗುಜರಾತ್‌ನಲ್ಲಿ ಮಕ್ಕಳ ಪೌಷ್ಟಿಕ ಅಂಶ ಪ್ರಮಾಣ ಗಮನಿಸಿದರೆ ಅಲ್ಲಿನ ಅಭಿವೃದ್ಧಿಯ ಸತ್ಯಾಂಶ ತಿಳಿಯುತ್ತದೆ. ರೈತರ ಕೃಷಿ ಭೂಮಿ ಕಿತ್ತುಕೊಂಡು ಖಾಸಗಿ ಕಂಪೆನಿಗಳಿಗೆ ನೀಡಿರುವುದೇ ಅವರ ಸಾಧನೆ ಎಂದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಚ್.ಪಿ ಲಕ್ಷ್ಮಿನಾರಾಯಣ, ತಾಲ್ಲೂಕು ಕಾರ್ಯದರ್ಶಿ ಜಯರಾಮರೆಡ್ಡಿ, ತಾಲ್ಲಾಕು ಪಂಚಾಯತಿ ಉಪಾಧ್ಯಕ್ಷ ಆದಿನಾರಾಯಣರೆಡ್ಡಿ, ಸದಸ್ಯ ಮುನಿರೆಡ್ಡಿ, ಮುಖಂಡರಾದ ಭೈರಪ್ಪ, ಪವಿತ್ರಾ, ಶಿವಪ್ಪ, ಹನುಮಂತರೆಡ್ಡಿ, ಅಶ್ವತ್ಥರೆಡ್ಡಿ, ವೆಂಕಟಶಿವಾರೆಡ್ಡಿ, ಅಶ್ವತ್ಥಪ್ಪ, ಅಶೋಕ್, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.