ಶಿಡ್ಲಘಟ್ಟ: ಸರ್ಕಾರಗಳು ಯುವ ಜನತೆಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಕೃಷ್ಣಾರೆಡ್ಡಿ ಆರೋಪಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ‘ನಾವೆಲ್ಲಾ ಚೆನ್ನಾಗಿರಲು ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಅರಾಜಕತೆ ಹೆಚ್ಚಾಗಿದೆ. ಯುವಜನತೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರಗಳೂ ವಿಫಲವಾಗಿವೆ. ಚುನಾವಣೆಗಳು ಬರುತ್ತಿದ್ದಂತೆ ದೇಶದ ಯುವಜನತೆಯನ್ನು ಆಕರ್ಷಿಸಲು ವಿವಿಧ ರೂಪಗಳಲ್ಲಿ ಕಾರ್ಯತಂತ್ರವನ್ನು ರೂಪಿಸುತ್ತಿವೆ ಎಂದರು.
ಲೋಕಸಭಾ ಚುನಾವಣೆ ಘೋಷಣೆ-ಯಾವುದಕ್ಕೆ ಮೊದಲೇ ಗುಜರಾತ್ ನರಮೇಧದ ಕುಖ್ಯಾತಿ ಪಡೆದ ನರೇಂದ್ರಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅಲ್ಲಿನ ವಸ್ತುಸ್ಥಿತಿಯನ್ನು ಜನತೆಗೆ ತೋರಿಸುವಲ್ಲಿ ಮಾಧ್ಯಮಗಳು ವಿಫಲವಾಗುತ್ತಿವೆ. ಸಾವಿರಾರು ಮಂದಿ ಅಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹೆಣ್ಣುಮಕ್ಕಳು ಬೀದಿಗಳಲ್ಲಿ ಸ್ನಾನ ಮಾಡುವಂತಹ ಹೀನಾಯ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಗುಜರಾತ್ ರಾಜ್ಯದಲ್ಲಿ ಕಾರ್ಪೋರೇಟ್ ಕಂಪೆನಿಗಳು ಹೂಡುತ್ತಿರುವ ಬಂಡವಾಳಕ್ಕಿಂತ ದುಪ್ಪಟ್ಟು ಸವಲತ್ತನ್ನು ಸರ್ಕಾರ ಕಂಪೆನಿಗಳಿಗೆ ನೀಡುತ್ತಿದ್ದು, ಜನಸಾಮಾನ್ಯರನ್ನು ಕಡೆಗಣಿಸಲಾಗಿದೆ. ಇನ್ನು ಕಾಂಗ್ರೆಸ್ ನೀತಿಯಿಂದಾಗಿ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಿವೈಎಫ್ಐ ರಾಜ್ಯ ಮುಖಂಡ ಮುನೀಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ವಾಸು, ಬಾಬು, ನಾಗೇಶ್, ಪ್ರದೀಪ್, ಮುಜಾಹಿದ್, ಅಂಬರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.