ADVERTISEMENT

ರಾಜಕಾಲುವೆ ಸ್ವಚ್ಛಗೊಳಿಸಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 5:54 IST
Last Updated 16 ಅಕ್ಟೋಬರ್ 2017, 5:54 IST

ಶಿಡ್ಲಘಟ್ಟ: ’ಕೆರೆ ಕುಂಟೆಗಳಿಗೆ ನೀರು ಹರಿಸುವ ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು. ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ತಾಲ್ಲೂಕಿನ ದಿಬ್ಬೂರಹಳ್ಳಿಯ ಭೈರಸಾಗರ ಕೆರೆ, ತಲಕಾಯಲಬೆಟ್ಟದ ಶ್ರೀನಿವಾಸ ಸಾಗರ ಕೆರೆ ಹಾಗು ಗಂಜಿಗುಂಟೆಯ ರೆಡ್ಡಿಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಮಳೆಯಿಂದ ಬಂದ ನೀರು ಮನೆಗಳಿಗೆ ರಸ್ತೆಗಳ ಮೇಲೆ ಸೇರಿದಂತೆ ರೈತರ ತೋಟಗಳಿಗೆ ನುಗ್ಗಿ ರೈತ ಬೆಳೆದಂತಹ ಬೆಳೆ ಹಾಳಾಗುತ್ತಿವೆ. ಹಾಗಾಗಿ ಕೂಡಲೇ ಒತ್ತುವರಿ ಆಗಿರುವಂತಹ ರಾಜಕಾಲುವೆಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ನಮ್ಮ ಪೂರ್ವಿಕರು ನಿರ್ಮಿಸಿರುವಂತಹ ಕೆರೆ ಕುಂಟೆಗಳನ್ನು ಉಳಿಸಬೇಕು. ಪೂರ್ವಿಕರು ಹಿಂದೆ ಕೆರೆ ಕುಂಟೆ ನಿರ್ಮಿಸಿದ ಪರಿಣಾಮ ಕಳೆದ ಮೂವತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಯಥೇಚ್ಛವಾಗಿ ನೀರು ಲಭ್ಯವಿತ್ತು.

ADVERTISEMENT

ಆದರೆ ಇತ್ತೀಚೆಗೆ ಜನರ ದುರಾಸೆಯಿಂದ ಕೆರೆ ಕುಂಟೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದ ಮಳೆಯಿಂದ ಬಂದಂತಹ ನೀರು ಸರಾಗವಾಗಿ ಕೆರೆ ಕುಂಟೆಗಳಿಗೆ ಹರಿಯುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ’ಬೆಂಗಳೂರಿನಲ್ಲಿರುವ ಹಲವಾರು ಕೆರೆಗಳು ಮುಚ್ಚಿರುವ ಪರಿಣಾಮ ಇದೀಗ ಬೀಳುತ್ತಿರುವ ಮಳೆ ನೀರು ಸಂಗ್ರಹವಾಗಲು ಸ್ಥಳವಿಲ್ಲದೇ ಮನೆಗಳ ನುಗ್ಗುವ ಸ್ಥಿತಿ ಬಂದಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುವ ಮೂಲಕ ಕೆರೆ ಕುಂಟೆ ಕಾಪಾಡಲು ಮುಂದಾಗಬೇಕು’ ಎಂದರು.

ನಗರಕ್ಕೆ ಹೊಂದಿಕೊಂಡಂತಿರುವ ಅಮ್ಮನ ಕೆರೆ ಹಾಗು ಗೌಡನ ಕೆರೆಯಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿರುವ ಜಾಲಿ ಗಿಡಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಸೇರಿದಂತೆ ಅರಣ್ಯ ಇಲಾಖೆ ಕೂಡಲೇ ಮುಂದಾಗಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಮುಖಂಡರಾದ ಬೈರರೆಡ್ಡಿ, ಮಧು, ಪುರುಷೋತ್ತಮ್, ಶ್ರೀರಾಮಪ್ಪ, ಸೀತಭೈರರೆಡ್ಡಿ, ನರಸಿಂಹಯ್ಯ, ಶ್ರಿರಾಮ್, ಮಹಿಳಾ ಮೋರ್ಚಾದ ಸುಶೀಲಮ್ಮ, ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.