ADVERTISEMENT

ರಾತ್ರಿ 8ರ ನಂತರ ಊಟಕ್ಕೆ ತಳ್ಳುಗಾಡಿಯೇ ಗತಿ!

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 6:18 IST
Last Updated 23 ಡಿಸೆಂಬರ್ 2013, 6:18 IST
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಸಂಜೆ ತಳ್ಳುಗಾಡಿಯೊಂದರ ಬಳಿ ಆಹಾರ ಸವಿಯುತ್ತಿರುವ ಜನರು.
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಸಂಜೆ ತಳ್ಳುಗಾಡಿಯೊಂದರ ಬಳಿ ಆಹಾರ ಸವಿಯುತ್ತಿರುವ ಜನರು.   

ಚಿಕ್ಕಬಳ್ಳಾಪುರ: ‘ನಮ್ಮೂರು ಜಿಲ್ಲಾ ಕೇಂದ್ರ ಆಗಿರುವುದರಲ್ಲಿ ಎರಡು ಮಾತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಕೆಲ ದಿನಗಳ ಹಿಂದೆ­ಯಷ್ಟೇ ನಗರ ಮತ್ತು ಗ್ರಾಮೀಣ ವ್ಯಾಪ್ತಿ­ಯಲ್ಲಿ ಸಂಚರಿಸಲು ನಗರ ಸಾರಿಗೆ ಬಸ್‌ ಸೇವೆಯೂ ಆರಂಭಗೊಂಡಿದೆ.
ರೈಲ್ವೆ ನಿಲ್ದಾಣವೂ ಎಲ್ಲ ಸೌಕರ್ಯ­ಗಳನ್ನು ಒಳಗೊಂಡು ಅಭಿವೃದ್ಧಿಯೂ ಆಗಿದೆ. ಆದರೆ ಹೋಟೆಲ್, ಉಪಾ­ಹಾರ ಮತ್ತು ಊಟದ ವಿಷಯದಲ್ಲಿ ಮಾತ್ರ ನಮ್ಮೂರಿನಲ್ಲಿ ಅವಾಗ­ವಾಗ ಸ್ವಲ್ಪ ತೊಂದರೆಯಾಗುತ್ತೆ. ಹೊಟ್ಟೆ ತುಂಬಾ ಊಟ ಮಾಡಲೂ ಆಗದೇ ತಳ್ಳು­ಗಾಡಿಗಳಲ್ಲಿ ಸಿಗುವ ಆಹಾರ­ದಿಂದಲೇ ಸಮಾಧಾನಪಟ್ಟಿಕೊಳ್ಳ­ಬೇಕಾಗುತ್ತದೆ’

ಹೀಗೆ ಹೇಳಿದವರು ಚಿತ್ರದುರ್ಗದ ಮೂಲನಿವಾಸಿಯಾದ ಬಸವರಾಜು. ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಅವರು ಹೀಗೆ ಹೇಳಲು ಹಲವಾರು ಕಾರಣಗಳಿವೆ. ಅವರ ಮಾತಿನಲ್ಲಿ ಹೇಳುವುದಾದರೆ, ‘ನಗರದಲ್ಲಿ ನಿಷೇಧಾಜ್ಞೆ ಘೋಷಣೆ­ಯಾಗಿದೆ ಎಂಬಂತೆ ಸಂಜೆ 7 ರಿಂದ 8 ಗಂಟೆಯೊಳಗೆ ಬಹುತೇಕ ಹೋಟೆಲ್‌­ಗಳು ಬಂದ್‌ ಆಗುತ್ತವೆ. ರಾತ್ರಿ 9 ಗಂಟೆ ಸುಮಾರಿಗೆ ಊರೆಲ್ಲ ಸುತ್ತಾಡಿದರೂ ಒಳ್ಳೆಯ ಊಟ ಎಲ್ಲಿಯೂ ಸಿಗು­ವು­ದಿಲ್ಲ. ಬೇರೆ ದಾರಿಗಾಣದೇ ತಳ್ಳುಗಾಡಿ­ಗಳಲ್ಲಿ ಸಿಗುವ ಇಡ್ಲಿ, ಪುರಿ, ರೈಸ್‌­ಬಾತ್‌­ನಿಂದಲೇ ಸ್ವಲ್ಪ ಹೊಟ್ಟೆ ತುಂಬಿಸಿ­ಕೊಂಡು ಮಲಗಬೇಕಾಗುತ್ತದೆ’.

ನಗರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಹೋಟೆಲ್‌ಗಳಿದ್ದು, ಅವುಗಳಲ್ಲಿ ಮಾಂಸಾಹಾರ ಪೂರೈ­ಸುವ ಮಿಲ್ಟ್ರಿ ಹೋಟೆಲ್‌ಗಳ ಸಂಖ್ಯೆಯೇ ಹೆಚ್ಚು. ಬಹುತೇಕ ಹೋಟೆಲ್‌­ಗಳು ಸಂಜೆ 7 ರಿಂದ 8 ಗಂಟೆಯೊಳಗೆ ಮುಚ್ಚಲ್ಪಟ್ಟರೆ, ಬಹುತೇಕ ಮಂದಿ ತಳ್ಳುಗಾಡಿಗಳನ್ನೇ ಅವಲಂಬಿಸುತ್ತಾರೆ. ನಗರದ ಬಾಲಾಜಿ ಚಿತ್ರಮಂದಿರ, ವಾಣಿ ಚಿತ್ರಮಂದಿರ ಮತ್ತು ಕೆನರಾ ಬ್ಯಾಂಕ್‌ ಬಳಿ ನಿಲುಗಡೆಯಾಗುವ ತಳ್ಳುಗಾಡಿಗಳ ಬಳಿಯಂತೂ ಜನದಟ್ಟಣೆಯೇ ನೆರೆದಿ­ರುತ್ತದೆ. ರಾತ್ರಿ 9 ರಿಂದ 11 ಗಂಟೆ­ಯವರೆಗೆ ಜನರು ಅಲ್ಲಿಯೇ ಆಹಾರ ಸೇವಿಸಿದರೆ, ಇನ್ನೂ ಕೆಲವರು ಮನೆ­ಗಳಿಗೆ ಪಾರ್ಸಲ್‌ಗಳನ್ನು ಕಟ್ಟಿಕೊಂಡು ಹೋಗುತ್ತಾರೆ.

‘ಬೇರೆ ಜಿಲ್ಲೆಗಳ ತಾಲ್ಲೂಕು ಕೇಂದ್ರ­ಗಳಲ್ಲಿ ಚಿಕ್ಕ ಮತ್ತು ದೊಡ್ಡ ಹೋಟೆಲ್‌­ಗಳು ರಾತ್ರಿ ಕನಿಷ್ಠ 10 ಗಂಟೆಯ­ವರೆಗೆಯಾದರೂ ತೆರೆದಿರುತ್ತವೆ. ಊಟಕ್ಕೆ ಗ್ರಾಹಕರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೋಟೆಲ್‌ನವರು ಇರು­ತ್ತಾರೆ. ಆದರೆ ನಮ್ಮೂರಿನ ಸ್ಥಿತಿಯೇ ಭಿನ್ನ. ರಾತ್ರಿ 8ರ ಸುಮಾರಿಗೆ ಹೋದರೆ, ತಿಂಡಿ ಖಾಲಿ–ಹೋಟೆಲ್ ಬಂದ್‌ ಎಂಬ ಉತ್ತರ ಸಿಗುತ್ತದೆ. ಇದ­ರಿಂದಾಗಿ ಕೆಲವರು ಮಿಲ್ಟ್ರಿ ಹೋಟೆಲ್‌­ಗಳಿಗೆ ಹೋಗುತ್ತಾರೆಯಾದರೂ ಇನ್ನೂ ಕೆಲವರು ತಳ್ಳುಗಾಡಿಗಳನ್ನೇ ಅವಲಂಬಿಸುತ್ತಾರೆ.  ಇದಕ್ಕೆ ಏನೂ ಕಾರಣವೇನು ಎಂಬುದು ಇವತ್ತಿಗೂ ಗೊತ್ತಾಗಿಲ್ಲ’ ಎಂದು ನಗರದ ನಿವಾಸಿ ನಾಗೇಶ್‌ ತಿಳಿಸಿದರು.

ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡುವ ತಳ್ಳುಗಾಡಿಯವರು ಬೇರೆ­ಯದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿ­ಸು­ತ್ತಾರೆ. ‘ಮೊದಲೆಲ್ಲ ನಾವು ಮೆಣ­ಸಿನ­ಕಾಯಿ ಬಜ್ಜಿ, ವಡೆ ಮತ್ತು ಬೊಂಡಾ ಮಾತ್ರವೇ ತಯಾರಿಸುತ್ತಿ­ದ್ದೆವು. ಆದರೆ ರಾತ್ರಿ 8ರ ಸುಮಾರಿಗೆ ಯಾವಾಗ ಜನರಿಂದ ಬೇರೆ ಬೇರೆ ಆಹಾರದ ಬಗ್ಗೆ ಬೇಡಿಕೆ ವ್ಯಕ್ತ­ವಾಯಿತೋ, ಆಗಿನಿಂದ ನಾವು ಬೇರೆ ಬೇರೆಯದ್ದೇ ಆಹಾರಗಳನ್ನು ಸಿದ್ಧಪಡಿ­ಸಲು ಆರಂಭಿಸಿದೆವು. ಈಗ ಬಜ್ಜಿ, ವಡೆಯಲ್ಲದೇ ಪುರಿ, ದೋಸೆ, ಚಿತ್ರನ್ನ, ಚಪಾತಿ ಮುಂತಾದವು ಕೊಡು­ತ್ತೇವೆ. ಜನರು ಇಲ್ಲಿಯೇ ನಿಂತು­ಕೊಂಡು ಉಂಡು, ಮನೆಗೂ ಪಾರ್ಸಲ್‌ ಕಟ್ಟಿ­ಕೊಂಡು ಹೋಗು­ತ್ತಾರೆ’ ಎಂದು ತಳ್ಳುಗಾಡಿಯವರು ಹೇಳುತ್ತಾರೆ.

‘ಜನರು ಬಯಸುವವರೆಗೆ ನಾವು ತಳ್ಳುಗಾಡಿಗಳಲ್ಲಿ ಆಹಾರ ತಯಾ­ರಿಸಲು ಸಿದ್ಧರಿದ್ದೇವೆ. ಆದರೆ ಕೆಲ ಬಾರಿ ಪೊಲೀಸರು ಬಂದು ಎಲ್ಲವನ್ನೂ ಸ್ಥಗಿತ­ಗೊಳಿಸುತ್ತಾರೆ. ಆಗ ಜನರು ಹಸಿದು­ಕೊಂಡೇ ಮನೆಗೆ ಹೋಗುತ್ತಾರೆ. ನಮ್ಮ ತಳ್ಳುಗಾಡಿಗಳಲ್ಲಿನ ಆಹಾರವನ್ನು ಯುವ­ಜನರು ಮತ್ತು ಮಧ್ಯ­ವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಸವಿಯುತ್ತಾರೆ. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಆಗದವರು, ಪರ­ವೂರಿನವರು ಇಲ್ಲವೇ ಬೆಂಗಳೂರು ಅಥವಾ ಬೇರೆ ಬೇರೆ ಊರುಗಳಲ್ಲಿ ಕೆಲಸ ಮುಗಿಸಿಕೊಂಡು ತಡವಾಗಿ ಮರಳುವವರು ನಮ್ಮ ಆಹಾರ ಸವಿ­ಯು­ತ್ತಾರೆ. ನಮ್ಮ ತಳ್ಳುಗಾಡಿ ಇರದಿ­ದ್ದರೆ, ಅವರಿಗೆ ಇನ್ನೂ ಕಷ್ಟವಾಗಿ­ರೋದು’ ಎಂದು ಅವರು ಹೇಳುತ್ತಾರೆ.

‘ನಾವು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೋಟೆಲ್‌ ತೆರೆದಿರುತ್ತೇವೆ. ಬರುವ ಗ್ರಾಹಕರ ಸಂಖ್ಯೆಯಲ್ಲಿ ಏರಿಳಿತ ಇರು­ತ್ತದೆ. ಊಟಕ್ಕಿಂತ ಹೆಚ್ಚಾಗಿ ತಿಂಡಿ­ಯನ್ನೇ ಪೂರೈಸುವ ನಮ್ಮ ಹೋಟೆಲ್‌­ಗಳಿಗೆ ಸಂಜೆ 7ರ ನಂತರ ಗ್ರಾಹಕರು ಬರುವ ಸಂಖ್ಯೆ ಕಡಿಮೆಯಾಗ­ತೊಡಗು­ತ್ತದೆ. ಅನಗತ್ಯವಾಗಿ ಹೋಟೆಲ್ ತೆರೆದು ಸಮಯ ವ್ಯಯ ಮಾಡುವು­ದರ ಬದಲು ಬೇಗನೇ ಬಾಗಿಲು ಹಾಕುತ್ತೇವೆ’ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ.

ಉಡುಪಿ ಹೋಟೆಲ್‌, ಖಾನಾವಳಿ ಇಲ್ಲ!
‘ಬಹುತೇಕ ಊರುಗಳಲ್ಲಿ ಉಡುಪಿ ಹೋಟೆಲ್‌ ಇಲ್ಲವೇ ಖಾನಾವಳಿಯಾದರೂ ಇದ್ದೇ ಇರುತ್ತದೆ. ಆದರೆ ನಮ್ಮೂರಿನಲ್ಲಿ ಅವೆರಡೂ ಇಲ್ಲ. ಬಹುತೇಕ ಹೋಟೆಲ್‌ಗಳಲ್ಲಿ ಮುದ್ದೆ ಸಿಗುತ್ತದೆಯಾದರೂ ಚಪಾತಿ ಅಥವಾ ರೊಟ್ಟಿ ಸಿಗುವುದಂತೂ ತುಂಬಾನೇ ಕಡಿಮೆ. ಚಪಾತಿ, ರೊಟ್ಟಿ ಸಿಗದಾದಾಗ ಕೆಲ ಹೋಟೆಲ್‌ಗಳಲ್ಲಿ ದೊರೆಯುವ ಪರೊಟಾಗೆ ಮೊರೆ ಹೋಗಬೇಕಾಗುತ್ತದೆ’ ಎಂದು ನಿವಾಸಿ ನಾಗರಾಜು ಹೇಳುತ್ತಾರೆ.

ಚಪಾತಿ, ರೊಟ್ಟಿ ಸವಿಯುವ ಜನರು ನಗರದಲ್ಲಿದ್ದಾರೆ. ಆದರೆ ಅವುಗಳನ್ನು ಉಣಬಡಿಸುವ ಹೋಟೆಲ್‌ಗಳು ತುಂಬಾನೇ ಕಡಿಮೆ ಇವೆ. ಒಂದು ವೇಳೆ ಅವುಗಳನ್ನು ಸಹ ಪೂರೈಸಿದರೆ ನಮ್ಮಂತಹವರಿಗೆ ತುಂಬ ಅನುಕೂಲವಾಗುತ್ತದೆ. ಬೇರೆ ಬೇರೆ ರುಚಿಯು ಸವಿದಂತೆ ಆಗುತ್ತದೆ’ ಎಂದು ಅವರು ತಿಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.