ADVERTISEMENT

ರೈತರ ಮೊಗದಲ್ಲಿ ಸಂತಸ ತಂದ ಮಳೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 9:30 IST
Last Updated 17 ಜುಲೈ 2012, 9:30 IST

ಚಿಂತಾಮಣಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಹಾಗೂ ಸೋಮವಾರ ನಸುಕಿನ ಜಾವ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಸುಮಾರು ಒಂದು ತಿಂಗಳಿನಿಂದ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದರು. ಭಾನುವಾರ ಬಿದ್ದ ಮಳೆಯಿಂದ ನೆಲ ಹದಗೊಂಡಿದೆ. ಇನ್ನೂ ಮೂರು ದಿನಗಳ ಕಾಲ ಬಿತ್ತನೆ ಚಟುವಟಿಕೆ ನಡೆಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ತೊಗರಿ ಮತ್ತು ನೆಲೆಗಡಲೆ ಬಿತ್ತನೆಯ ಕಾಲಾವಧಿ ಮುಗಿದಿದೆ. ಆದರೆ ರಾಗಿ ಮತ್ತು ಮುಸುಕಿನ ಜೋಳ ಬಿತ್ತನೆಗೆ ಇದು ಸಕಾಲ. ರೈತರು ತೊಗರಿಯ ಬದಲು ರಾಗಿ ಮತ್ತು ಜೋಳದ ಬಿತ್ತನೆಗೆ ಗಮನ ಹರಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ನಯೀಂಪಾಷಾ ಸಲಹೆ ನೀಡುತ್ತಾರೆ.
ಭಾನುವಾರ ತಾಲ್ಲೂಕಿನಲ್ಲಿ 55.8 ಮಿಮೀ ಮಳೆಯಾಗಿದೆ.

ತುಂತುರು ಸೋನೆ ಮಳೆಯಾಗಿದ್ದರಿಂದ ಭೂಮಿ ಚೆನ್ನಾಗಿ ನೆನದಿದೆ. ಕೆಲವು ಪ್ರದೇಶಗಳಲ್ಲಿ ಒಂದು ಬಿತ್ತನೆ ಮಾಡುತ್ತಿದ್ದಾರೆ. ಹೆಚ್ಚು ಮಳೆ ಬಿದ್ದಿರುವ ಕಡೆ ಸೋಮವಾರ ಬಿತ್ತನೆ ಸಾಧ್ಯವಾಗದ ಕಾರಣ, ಮಂಗಳವಾರ ಅಥವಾ ಬುಧವಾರ ಬಿತ್ತನೆ ಮಾಡಬಹುದು ಎಂದು ಕೃಷಿ ಅಧಿಕಾರಿ ಮಂಜುನಾಥ್ ಹೇಳಿದರು.

ಕೆರೆ ಕುಂಟೆಗಳಿಗೆ ನೀರು ಬರದೆ ಆತಂಕ ಮುಂದುವರೆದಿದೆ. ಭೂಮಿ ಹಸುರಾಗಿ ಜಾನುವಾರುಗಳಿಗೆ ಹುಲ್ಲು ಸಿಗಬಹುದು. ಕುಡಿಯುವ ನೀರಿನ ಸಮಸ್ಯೆ ಮುಂದುವರೆಯುತ್ತದೆ ಎಂದು ಕೃಷಿಕ ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.