ಶಿಡ್ಲಘಟ್ಟ: ರೇಷ್ಮೆಗೂಡಿನ ಬೆಲೆ ಕುಸಿತ ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರೈಲು ತಡೆ ಚಳವಳಿ ನಡೆಸಿದರು. ರೈಲು ತಡೆಗೆ ಅನುಮತಿ ನಿರಾಕರಿಸಿದ ಪೊಲೀಸರ ಕ್ರಮವನ್ನು ಏರಿದ ದನಿಯಲ್ಲಿ ಖಂಡಿಸಿದರು.
ರೇಷ್ಮೆ ಗೂಡು ಬೆಲೆ ಕುಸಿದಿರುವ ಕಾರಣ ತಾಲ್ಲೂಕಿನಲ್ಲಿ ರೇಷ್ಮೆ ಉದ್ಯಮ ಸಂಕಷ್ಟ ಸ್ಥಿತಿಗೆ ತಲುಪಿದೆ. ರೇಷ್ಮೆಯನ್ನೇ ನಂಬಿದ ರೈತರು, ರೀಲರ್‌ಗಳು, ಟ್ವಿಸ್ಟರ್‌ಗಳು, ಕೂಲಿ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಒದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಳವಳಿ ನಡೆಸಲು ನಿಲ್ದಾಣಕ್ಕೆ ಬಂದ ರೈತರನ್ನು ತಡೆದ ಪೊಲೀಸರು, ‘ತಹಶೀಲ್ದಾರ್‌ಗೆ ಮನವಿ ಪತ್ರ ಕೊಡಿ, ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಿ, ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟಿಸಿ ಜನರಿಗೆ ತೊಂದರೆ ಕೊಡಬೇಡಿ’ ಎಂದು ಹೇಳಿದರು. ಪೊಲೀಸರ ಮಾತು ಲೆಕ್ಕಿಸದ ರೈತರು ರೈಲು ತಡೆದು ಘೋಷಣೆ ಕೂಗಿದರು.
ಹೆದ್ದಾರಿ ತಡೆಗೆ ತೀರ್ಮಾನ: ರೇಷ್ಮೆ ಬೆಳೆಗಾರರ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ಜೂನ್ 20ರಂದು ಹೆದ್ದಾರಿ ತಡೆ ನಡೆಸಲು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಭೆ ಮಂಗಳವಾರ ತೀರ್ಮಾನಿಸಿತು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಅಬ್ಲೂಡು ಆರ್.ದೇವರಾಜ್, ಮಳಮಾಚನಹಳ್ಳಿ ದೇವರಾಜ್, ಮಂಜುನಾಥ್, ಎಚ್.ಜಿ.ಗೋಪಾಲಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.