ಚಿಕ್ಕಬಳ್ಳಾಪುರ: ಪುನರ್ವಸತಿ ಸೌಲಭ್ಯ, ಮೂಲಸೌಕರ್ಯ ಒದಗಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿ ನಗರದ ಕಂದವಾರ ಬಡಾವಣೆ ಶೆಡ್‌ಗಳಲ್ಲಿ ವಾಸವಿರುವ ಬಸಪ್ಪ ಛತ್ರದ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶೆಡ್‌ಗಳ ಮುಂಭಾಗ ಪ್ರತಿಭಟನೆ ನಡೆಸಿದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸುಮಾರು 42ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು, ನಮಗೆ ವರ್ಷಗಳಿಂದ ಭರವಸೆ ನೀಡಲಾಗುತ್ತಿದೆ ಹೊರತು ಬೇಡಿಕೆ ಮಾತ್ರ ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.
ಬಿ.ಬಿ.ರಸ್ತೆ ಸಮೀಪದ ಬಸಪ್ಪ ಛತ್ರದ ಬಳಿ ವಾಸವಿದ್ದ ನಮ್ಮನ್ನು ಇಲ್ಲಸಲ್ಲದ ಕಾರಣ ಹೇಳಿ ಅಲ್ಲಿಂದ ಎತ್ತಂಗಡಿ ಮಾಡಿಸಲಾಯಿತು. 3 ವರ್ಷಗಳಿಂದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಿದ್ದೇವೆ. ಯಾವುದೇ ಮೂಲಸೌಕರ್ಯ, ಉತ್ತಮ ವಸತಿ ಸೌಕರ್ಯ ಕಲ್ಪಿಸಿಲ್ಲ ಎಂದರು.
ಶೆಡ್ ನಿವಾಸಿ ಮಂಜು ಮಾತನಾಡಿ, ಪುನರ್ವಸತಿ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಯಾರದ್ದು ಎಂಬುದು ನಮಗೆ ಈವರೆಗೂ ಗೊತ್ತಾಗಿಲ್ಲ. ನಗರಸಭೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ, ಜಿಲ್ಲಾಧಿಕಾರಿ ಕಚೇರಿ ಎದುರಿಗೂ ಪ್ರತಿಭಟನೆ ನಡೆಸಿದೆವು. ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆ ಆರಂಭವಾಗಿದ್ದು, ಶೆಡ್ನಲ್ಲಿ ವಾಸವಿರಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಜತೆಗೆ ಹುಳು– ಹುಪ್ಪಟೆ ಕಾಟದಿಂದ ಯಾತನೆ ಅನುಭವಿಸುತ್ತಿದ್ದೇವೆ. ಕೆಲ ತಿಂಗಳ ಹಿಂದೆಯಷ್ಟೇ ತೀವ್ರ ಚಳಿಗೆ ಎರಡು ಮಕ್ಕಳು ಸಾವನ್ನಪ್ಪಿದ್ದವು. ಈ ಬೇಸಿಗೆಗೆ ಏನಾಗುತ್ತದೋ? ಅದಕ್ಕೆ ಯಾರು ಹೊಣೆಗಾರರು ಆಗುತ್ತಾರೆ ಎಂದು ಅವರು ಪ್ರಶ್ನಿಸಿದರು.
ನಿವಾಸಿಗಳಾದ ಶಂಕರ್, ಮಹೇಶ್, ಜಬೀ, ಅಬ್ದುಲ್, ಉಲ್ಲಾಶಾಮಿ, ಮಣಿ, ಗೌಶರ್, ಫಾತಿಮಾ, ಪಾಷಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.