ADVERTISEMENT

ವಸತಿ ಸೌಲಭ್ಯ ವಂಚಿತ ಮಾಕಿರೆಡ್ಡಿಪಲ್ಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:25 IST
Last Updated 4 ಜುಲೈ 2012, 5:25 IST

ಬಾಗೇಪಲ್ಲಿ: ತಾಲ್ಲೂಕಿನ ಮಾಕಿರೆಡ್ಡಿಪಲ್ಲಿ ತಾಂಡಾದ ಲಂಬಾಣಿ ಜನತೆ ಇಂದಿಗೂ ವಸತಿ ಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ. ಈಗಲೂ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ಬದುಕುವ ಪರಿಸ್ಥಿತಿ ಇವರದ್ದಾಗಿದೆ.
ಹಲವು ಬಾರಿ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ.

ಮಾಕಿರೆಡ್ಡಿಪಲ್ಲಿ ತಾಂಡಾದಲ್ಲಿ 50 ಮನೆಗಳಿವೆ. ಬಹುತೇಕರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಲಂಬಾಣಿಗಳು. ಅತ್ತ ಕೆಲಸವಿಲ್ಲದೇ, ಇತ್ತ ಸರ್ಕಾರದ ನೆರವು ಸಿಗದೆ ಸಂಕಷ್ಟ ಪಡುತ್ತಿದ್ದಾರೆ. 50ರಲ್ಲಿ 40 ಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. 

 ಇಲ್ಲಿ ನಿತ್ಯ ಹರಿಯುವ ಚರಂಡಿ ನೀರಿನಿಂದ ದುರ್ನಾತ ಹಾಗೂ ಅನಾರೋಗ್ಯದಿಂದ ಮಕ್ಕಳು ಹಾಸಿಗೆ ಹಿಡಿದಿದ್ದಾರೆ.

ಗ್ರಾಮದಲ್ಲಿ ಒಂದು ಸಿಸ್ಟನ್, ಎರಡು ಕೊಳಾಯಿಗಳು ಇವೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೆ ಅಭಾವ ಎದುರಿಸುವಂತಾಗಿದೆ.  

 ಹ್ಲ್ಲುಲಿನಿಂದ ಗುಡಿಸಲು ನಿರ್ಮಾಣಗೊಂಡಿರುವುದರಿಂದ ಅಪಾಯ ಹೆಚ್ಚು. ಗಾಳಿ ಜೋರಾಗಿ ಬೀಸಿದರೆ ಹುಲ್ಲು ಕಿತ್ತುಕೊಂಡು ಹೋಗುವ ಭಯ ಇವರದ್ದಾಗಿದೆ. ಒಂದೇ ಕಡೆ ಅಡುಗೆ ಮನೆ, ಮಲಗುವ ಕೋಣೆ ಹಾಗೂ ವಿಶ್ರಾಂತಿ ಸ್ಥಳ.

ಗುಡಿಸಲಿನ ಎದುರು ತೆಂಗಿನ ಮರದ ತಡಕೆಗಳು ಅಡ್ಡಹಾಕಿಕೊಂಡು ಸ್ನಾನ ಮಾಡಬೇಕು. ಇನ್ನು ಶೌಚಾಲಯವಂತೂ ಕನಸಾಗಿರುವುದು ಬಯಲು ಬಹಿರ್ದೆಸೆ ಅನಿವಾರ್ಯ.

 ಈ ಹಿಂದೆ ಕೆಲವು ಸಾಂಕ್ರಾಮಿಕ ರೋಗಗಳು, ಚಿಕುನ್‌ಗುನ್ಯಾ, ಮಲೇರಿಯಾ ದಾಳಿ ಇಟ್ಟಿದ್ದವು. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಹರಿದು ಬರುತ್ತಿದೆ. ಆದರೆ ಸದ್ವಿನಿಯೋಗವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಬಡತನದಲ್ಲಿ ನರಳುತ್ತಿರುವ ನಮಗೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು.  ಮಳೆ ಬಂದರೆ ತೀವ್ರ ತೊಂದರೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಂಡಗಳಿಗೆ  ಭೇಟಿ ನೀಡಬೇಕು. ಕೂಡಲೇ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮದ ಮಹಿಳೆ ತುಳಸಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.