ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ: ಕಾರ್ಮಿಕರ ಪರದಾಟ

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2013, 6:48 IST
Last Updated 20 ಡಿಸೆಂಬರ್ 2013, 6:48 IST

ಬಾಗೇಪಲ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ಗೃಹಿಣಿಯರು, ರೈತರು, ಗಾರ್ಮೆಂಟ್ಸ್ ನೌಕರರು, ಮರಕೆಲಸದ ಕಾರ್ಮಿಕರು ಪರದಾಡುವಂತಾಯಿತು.

ಬೆಳಿಗ್ಗೆ 6ಕ್ಕೆ ಹೋದ ವಿದ್ಯುತ್‌ 9ಕ್ಕೆ ಬಂತು. ನಂತರ ಹೀಗೆ ಬಂದು ಹಾಗೆ ಹೋದ ಕರೆಂಟ್‌ ಎಷ್ಟು ಬಂದು ಎಷ್ಟು ಬಾರಿ ಹೋಯಿತು ಎಂಬ ಲೆಕ್ಕವೇ ಸಿಗಲಿಲ್ಲ.

ಚಟ್ನಿ ರುಬ್ಬಲು ಮಿಕ್ಸಿ ಮುಂದೆಯೇ ಒಂದಷ್ಟು ಗೃಹಿಣಿಯರು ತಪಸ್ಸು ಮಾಡಿದರು. ಅಷ್ಟರಲ್ಲಿ ಶಾಲೆ– ಕಚೇರಿಗಳಿಗೆ ವೇಳೆಯಾಗಿ ಮಕ್ಕಳು– ನೌಕರರು ಬರೀ ದೋಸೆ ಡಬ್ಬಿಗೆ ಹಾಕಿಕೊಂಡು ಓಡಿದ್ದರು. ಅನೇಕರು ಉಪವಾಸದಲ್ಲೇ ಕಚೇರಿ– ಕಾರ್ಖಾನೆಯತ್ತ ಪಾದ ಬೆಳೆಸಿದರು.

‘ಮಳೆಗಾಲದಲ್ಲಿಯೇ ವಿದ್ಯುತ್‌ ವಿತರಣೆ ಹೀಗಾದರೆ ಇನ್ನು ಬೇಸಿಗೆ ಹೇಗೆ ಕಳೆಯುವುದು?’ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಸಾಮಿಲ್‌, ಗಾರ್ಮೆಂಟ್ಸ್‌ಗಳಲ್ಲಿ ಇಡಿ ದಿನ ನೌಕರರು ವಿದ್ಯುತ್‌ ನಿರೀಕ್ಷೆಯಲ್ಲಿ ದಿನ ಕಳೆದರು.

ನೀರಿಗೆ ಹಾಹಾಕಾರ: ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ– ರಾತ್ರಿಯ ವಿದ್ಯುತ್ ಸರದಿಯಲ್ಲೂ ಅನೇಕ ಬಾರಿ  ಕಡಿತಗೊಳಿಸಲಾಗುತ್ತಿದೆ. ಇದರಿಂದ ರೈತರು ಪಂಪ್‌ಸೆಟ್‌ಗಳ ಮುಂದೆ ಕಾಯಬೇಕಾಗಿದೆ. ಫಸಲು ನೀಡುವ ಸಂದರ್ಭ ಬೆಳೆಗಳಿಗೆ ನೀರು ಉಣಿಸಲಾರದೇ ರೈತರು ಆರ್ಥಿಕ ನಷ್ಟದ ಆತಂಕದಲ್ಲಿದ್ದಾರೆ. ವಿದ್ಯುತ್ ಕಡಿತದಿಂದ ನೀರೆತ್ತಲು ಸಾಧ್ಯವಾಗದೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

‘ಅಸಮರ್ಪಕ ವಿದ್ಯುತ್‌ ಸರಬರಾಜಿನ ಕಾರಣ ಕೈಗೆ ಬಂದ ಬೆಳೆ ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಬೆಸ್ಕಾಂ ಅಧಿಕಾರಿಗಳು ನಿಗದಿತ ಅವಧಿಯಲ್ಲಿಯಲ್ಲಾದರೂ ಗುಣಮಟ್ಟದ ವಿದ್ಯುತ್‌ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಪೋತೇಪಲ್ಲಿ ಗ್ರಾಮದ ರೈತ ಚಂಚಪ್ಪಗಾರಿ ಕೃಷ್ಣಪ್ಪ ಆಗ್ರಹಿಸಿದರು.

‘ದೂರದ ಗ್ರಾಮೀಣ ಪ್ರದೇಶಗಳಿಂದ ಪಟ್ಟಣ ಪ್ರದೇಶಗಳಿಗೆ ಕೂಲಿಗೆ ಬರುತ್ತೇವೆ. ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಒಂದು ದಿನದ ಪೂರ್ಣ ಕೂಲಿಯೂ ಸಿಗುತ್ತಿಲ್ಲ. ಕೂಲಿ ಹಣ ಸಿಗದಿದ್ದರೆ ಕುಟುಂಬದವರು ಉಪವಾಸ ಇರಬೇಕಾಗುತ್ತದೆ’ ಎಂದು ಶಂಕರ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.