ADVERTISEMENT

ಶಿಡ್ಲಘಟ್ಟದಲ್ಲಿ ಶಿಳ್ಳೆಹಾಕಿದ ರೈಲು !

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 3:50 IST
Last Updated 22 ಮಾರ್ಚ್ 2012, 3:50 IST

ಶಿಡ್ಲಘಟ್ಟ: ಹಿರಿಯರು, ಕಿರಿಯರು ಎಲ್ಲರೂ ಕುತೂಹಲ ಕಣ್ಣಿ ನಿಂದ ನೋಡುತ್ತಿದ್ದರು. `ಅಬ್ಬಾ ಇಪ್ಪತ್ತು ವರ್ಷಗಳ ನಂತರ ನಮ್ಮೂರಿಗೂ ರೈಲು ಬಂತು~ ಎಂದು ಕೆಲವರು ಮಾತ ನಾಡು ತ್ತಿದ್ದರೆ, ಇದು ಎಲ್ಲೆಲ್ಲಿಗೆ ಹೋಗುತ್ತೆ? ಬೆಂಗಳೂರಿಗೆ ಎಷ್ಟು ಹೊತ್ತಿಗೆ ತಲುಪುತ್ತೆ? ಎಂಬ ಪ್ರಶ್ನೆಗಳು ಕೆಲವರದ್ದು.

 ಪಟ್ಟಣದ ನೂತನ ರೈಲ್ವೆ ನಿಲ್ದಾಣಕ್ಕೆ ಪ್ರಾಯೋಗಿಕವಾಗಿ ರೈಲ್ವೆ ಎಂಜಿನ್ ಚಿಕ್ಕಬಳ್ಳಾಪುರದಿಂದ ಬುಧವಾರ ಆಗಮಿಸಿ ದಾಗ ಅದನ್ನು ನೋಡಲು ಜನರು ಕುತೂಹಲದಿಂದ ವೀಕ್ಷಿ ಸುತ್ತಿದ್ದರು. ಯುವಕರು ರೈಲ್ವೆ ಎಂಜಿನನ್ನು ಹತ್ತಿ ನೋಡಲು ತವಕಿಸಿದರೆ, ಮಕ್ಕಳು ಹೊಸ ಆಟಿಕೆ ಎಂಬಂತೆ ಆಸೆ ಕಂಗಳಿಂದ ನೋಡುತ್ತಿದ್ದರು.

ಕೆಲವೆಡೆ ಊರ ಹೊರಗೆ ರೈಲ್ವೆ ನಿಲ್ದಾಣವಿದ್ದರೆ ಶಿಡ್ಲ ಘಟ್ಟದಲ್ಲಿ ಮಾತ್ರ ಊರ ಮಧ್ಯದಲ್ಲಿ ಹೃದಯದಂತಿದೆ ರೈಲ್ವೆ ನಿಲ್ದಾಣ. ಹಾಗಾಗಿ ರೈಲ್ವೆ ಇಂಜನ್ನಿನ `ಕೂ...~ ಎಂಬ ಶಬ್ದ ಪ್ರತಿ ಮನೆಗೂ ಕೇಳಿಸುತ್ತದೆ. ರೈಲ್ವೆ ಹಮಾಲಿ ಕಾರ್ಮಿಕರು ರೈಲ್ವೆ ಟ್ರ್ಯಾಲಿ ತಳ್ಳುತ್ತಾ ಎಂಜಿನ್ ಅನ್ನು ಮುಟ್ಟಿ ಸಂಭ್ರಮಿಸಿ ದರೆ, ಕೆಲವರು ಮೊಬೈಲ್‌ಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಮೊದಲ ರೈಲ್ವೆ ಎಂಜಿನ್ ಅನ್ನು ಸೆರೆಹಿಡಿಯುತ್ತಿದ್ದರು.

ವಿದ್ಯಾರ್ಥಿಗಳು ಮನೆಗೆ ಹೋಗುವುದನ್ನು ಮರೆತು ರೈಲ್ವೆ ಎಂಜಿನ್ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರೈಲ್ವೆ ಇಲಾಖೆ ಎಂಜಿನಿಯರರಾದ ಆನಂದ್, ಚಂದ್ರಾಯಪ್ಪ, ಕಿಸಾನ್ ಸಂಘದ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ಶಿವಮೂರ್ತಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.