ADVERTISEMENT

ಶಿಸ್ತು ಪಾಲನೆ: ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:23 IST
Last Updated 18 ಸೆಪ್ಟೆಂಬರ್ 2013, 6:23 IST

ಚಿಂತಾಮಣಿ: ಶಿಸ್ತು ಜೀವನದ ಅವಿಭಾಜ್ಯ ಅಂಗವಾದಾಗ ವಿದ್ಯಾರ್ಥಿ ಜೀವನ ಉಜ್ವಲವಾಗುತ್ತದೆ ಎಂದು ಬೆಂಗಳೂರಿನ ಬೆಸ್ಟ್‌ ಸ್ವಯಂ ಸೇವಾ ಸಂಸ್ಥೆ ಕಾರ್ಯದರ್ಶಿ ಸೈಯದ್‌ ನೂರುದ್ದೀನ್‌ ಅಭಿಪ್ರಾಯಪಟ್ಟರು.

ನಗರದ ಸೊಣ್ಣಶೆಟ್ಟಹಳ್ಳಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗ ಳವಾರ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರದಂತೆ ಗುರುತಿನ ಚೀಟಿಯೂ ಸಹ ಬಹು ಮುಖ್ಯವಾಗಿದೆ. ಬಾಲ್ಯದಿಂದಲೇ ಶಿಸ್ತು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಅಲ್ಪಸಂಖ್ಯಾತ ಮಕ್ಕಳು ಇತರೆ ವರ್ಗದವರಂತೆ ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕಿ  ಶಕೀಲಾ ಮನ್ವರಿ, ಲೇಖಕರಾದ ಎಂ.ಡಿ.ಅಸ್ಲಂ, ನೂರುಲ್ಲಾ ಇತರರು ಭಾಗವಹಿಸಿದ್ದರು.

ಬಿಪಿಎಲ್‌ ಕಾರ್ಡ್‌ಗೆ ಆಗ್ರಹ
ಚಿಂತಾಮಣಿ: ನಿವೃತ್ತ ನೌಕರರಿಗೂ ಬಿಪಿಎಲ್‌ ಕಾರ್ಡ್‌ ಸೌಲಭ್ಯ ಒದಗಿಸಬೇಕೆಂದು ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕಾಗತಿ ವೆಂಕಟರತ್ನಂ ಆಗ್ರಹಿಸಿದ್ದಾರೆ.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ತಾಲ್ಲೂಕು ನಿವೃತ್ತ ನೌಕರರ ಸಂಘದ ಸಭೆಯಲ್ಲಿ ಮಾತನಾಡಿದರು.

ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಸರ್ಕಾರದ ಸಣ್ಣಪುಟ್ಟ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ನೌಕರರು ಜೀವನ ಸಾಗಿಸುವುದು ಬಹಳ ಕಷ್ಟ. ರಾಜ್ಯ ಸಂಘದ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡಲಾಗುವುದು. ಸಂಘಟಿತ ಹೋರಾಟದಿಂದ ಮಾತ್ರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ನಿವೃತ್ತ ವೈದ್ಯಾಧಿಕಾರಿ ಡಾ.ಎಲ್‌.ಆರ್‌. ವರದರಾಜನ್‌, ಸಂಘದ ಉಪಾಧ್ಯಕ್ಷ ಸತ್ಯಕೀರ್ತಿ, ನಿವೃತ್ತ ಶಿಕ್ಷಕ ರೆಡ್ಡಪ್ಪಾಚಾರ್‌, ಶ್ರೀರಾಮಮೂರ್ತಿ ಮಾತನಾಡಿದರು.

ಗೋಡೆ ಕುಸಿದು ಕುರಿ ಸಾವು
ಚಿಂತಾಮಣಿ: ಮಳೆಗೆ ಕುರಿ ಸಾಕಾಣಿಕೆ ಮನೆಯೊಂದರ ಗೋಡೆ ಕುಸಿದು 6 ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಜುಂಜನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಪಾಪಮ್ಮ ಅವರ ಕುರಿದೊಡ್ಡಿಯ ಗೋಡೆ ಕುಸಿದು 6 ಕುರಿಗಳು ಸ್ಥಳದಲ್ಲೇ ಮೃತಪಟ್ಟು, ಕೆಲವು ಗಾಯಗೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆಗ್ರಹ: ಕುರಿಗಳ ಸಾವಿನಿಂದ ಸಾಕಷ್ಟು ನಷ್ಟವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥರೆಡ್ಡಿ ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.