ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ವಿರುದ್ಧದ ಸಮರದಲ್ಲಿ ಎಲ್ಲ ಕ್ಷೇತ್ರಗಳ ಸಂಘಸಂಸ್ಥೆಗಳು ಮತ್ತು ಹೋರಾಟಗಾರರು ಪಾಲ್ಗೊಂಡಿದ್ದರೂ ಕೆಲವರನ್ನು ಮಾತ್ರವೇ ಅತಿಯಾಗಿ ಬಿಂಬಿಸಲಾಗುತ್ತಿದೆ ಎಂದು ಸಿಪಿಎಂ ಜಿಲ್ಲಾ ಘಟಕ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ನಗರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಭ್ರಷ್ಟಾಚಾರದ ವಿರುದ್ಧ ಸಮರ-ವಾಸ್ತವತೆ ಮತ್ತು ಸವಾಲುಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಹಳೆಯ ಹೋರಾಟಗಾರರನ್ನು ಮರೆಮಾಚಿ ಹೊಸ ಹೋರಾಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
ಭ್ರಷ್ಟಾಚಾರ ವಿರುದ್ಧದ ಹೋರಾಟ ನಿನ್ನೆ-ಮೊನ್ನೆಯದ್ದಲ್ಲ. ದೇಶ ಸ್ವಾತಂತ್ರ್ಯಗೊಂಡ ದಿನದಿಂದ ಬೇರೆ ಬೇರೆ ಸ್ವರೂಪದಲ್ಲಿ ಮತ್ತು ಆಯಾ ಕಾಲ ಘಟ್ಟಗಳಲ್ಲಿ ಹೋರಾಟ ನಡೆದಿದೆ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ಚಿಂತಕ ಜೆ.ಪಿ.ನಾರಾಯಣ ಅವರು ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದರು. ಬೀದಿಗಿಳಿದು ಹೋರಾಟ ನಡೆಸುವಂತೆ ಜನರನ್ನು ಹುರಿದುಂಬಿಸಿದ್ದರು. ಇದು ರಾಜಕೀಯ ಮತ್ತು ಸಾಮಾಜಿಕವಾಗಿ ಭಾರಿ ಬದಲಾವಣೆಗೆ ಕಾರಣವೂ ಆಯಿತು ಎಂದು ಅವರು ಹೇಳಿದರು.
ಜೆ.ಪಿಯವರು ಆವರು ಆಯಾ ಕಾಲ ಘಟ್ಟದಲ್ಲಿ ಚಳವಳಿ ನಡೆಸಿದ ಪರಿಣಾಮ ಜನರು ಕೆಲ ಮಟ್ಟಿಗೆ ಜಾಗೃತಗೊಳ್ಳಲು ಸಾಧ್ಯವಾಯಿತು. ಬೃಹತ್ ಅಭಿಯಾನ ಕೈಗೊಳ್ಳಲು ಸಾಧ್ಯವಾಗದಿದ್ದರೂ ಪುಟ್ಟ ಪುಟ್ಟ ಸ್ವರೂಪಗಳಲ್ಲಿ ಸಂಘರ್ಷ ಮತ್ತು ಪ್ರತಿಭಟನೆಗಳು ನಡೆದವು. ಆ ಪ್ರಕ್ರಿಯೆ ಈಗಲೂ ಮುಂದುವರೆದಿದೆ ಎಂದು ಅವರು ಹೇಳಿದರು.
ಜವಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾನೂನು ಉಲ್ಲಂಘನೆಯನ್ನೇ ಭ್ರಷ್ಟಾಚಾರವೆಂದು ಪರಿಗಣಿಸಲಾಗುತಿತ್ತು. ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನಡೆದ 64 ಕೋಟಿ ರೂಪಾಯಿಯ ಭೋಫೋರ್ಸ್ ಹಗರಣವನ್ನೇ ಮಹಾ ಹಗರಣವೆಂದು ಬಿಂಬಿಸಲಾಗಿತ್ತು. ಆದರೆ ಈಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈಗಿನ ಭ್ರಷ್ಟಾಚಾರದ ವ್ಯಾಪ್ತಿಯನ್ನು ಹೋಲಿಸಿದರೆ, ಆಯಾ ವರ್ಷಗಳಲ್ಲಿ ನಡೆದಿದ್ದು ಭ್ರಷ್ಟಾಚಾರವೇ ಅಲ್ಲ ಎಂಬಂತೆ ತೋರುತ್ತದೆ ಎಂದು ಅವರು ತಿಳಿಸಿದರು.
ನವದೆಹಲಿಯ ಜಂತರ್‌ಮಂತರ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು, ಆದಿವಾಸಿಗಳು ಪ್ರತಿಭಟನೆ ನಡೆಸಿದಾಗ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗಲಿಲ್ಲ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾವಿರಾರು ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕೆ ಪ್ರಾಮುಖ್ಯತೆ ಸಿಗಲಿಲ್ಲ. ಆದರೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇ ತಡ, ಅದಕ್ಕೆ ಭಾರಿ ಪ್ರಚಾರ ಸಿಕ್ಕಿತು ಎಂದು ಶ್ರೀರಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಕೆ.ಪಿ.ಬಚ್ಚೇಗೌಡ, ಸಾಹಿತಿ ಪ್ರೊ. ಬಿ.ಗಂಗಾಧರಮೂರ್ತಿ, ಮಾಜಿ ಶಾಸಕಿ ಜ್ಯೋತಿರೆಡ್ಡಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಂಘಟನಾತ್ಮಕವಾಗಿ ಹೋರಾಟ ಕೈಗೊಂಡಲ್ಲಿ ಮತ್ತು ಯುವಕರು ಹೆಚ್ಚಿನ ಆಸಕ್ತಿ ತೋರಿದ್ದಲ್ಲಿ, ಭ್ರಷ್ಟಾಚಾರವನ್ನು ಹಂತಹಂತವಾಗಿ ತೊಡೆದು ಹಾಕಬಹುದು ಎಂದು ಅವರು ಹೇಳಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಭ್ರಷ್ಟಾಚಾರದ ಉಗಮ ಮತ್ತು ನಿವಾರಣೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನರಾಯಪ್ಪ, ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ನವೀನ್‌ಕುಮಾರ್, ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.