ADVERTISEMENT

ಸಂಶಯ ಮೂಡಿಸುವ ಅಧಿಕಾರಿಗಳ ನಡವಳಿಕೆ

ಈರಪ್ಪ ಹಳಕಟ್ಟಿ
Published 19 ಜೂನ್ 2017, 8:49 IST
Last Updated 19 ಜೂನ್ 2017, 8:49 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಶಾಲೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಶಾಲೆ   

ಚಿಕ್ಕಬಳ್ಳಾಪುರ: ದಾನದ ಜಾಗದಲ್ಲಿರುವ ತಾಲ್ಲೂಕಿನ ಎಸ್.ಗೊಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈವರೆಗೆ ಆಸ್ತಿಯ ದಾಖಲೆಗಳಿಲ್ಲ. ಹಕ್ಕುದಾಖಲೆ ಇಲ್ಲದ ಜಾಗದಲ್ಲಿ ದಾನಿಗಳ ನೆರವಿನಿಂದ ಹೊಸ ಕಟ್ಟಡ ಕಟ್ಟಲು ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ತೋರುತ್ತಿರುವ ತರಾತುರಿಯ ‘ಮುತುವರ್ಜಿ’ ನಾಗರಿಕರಲ್ಲಿ ಸಂಶಯ ಮೂಡುವಂತೆ ಮಾಡಿದೆ.

ಶಾಲೆಯ ಮುಖ್ಯ ಶಿಕ್ಷಕರ ಬಳಿ ಶಾಲಾ ಆಸ್ತಿಯ ದಾಖಲೆಗಳಿಲ್ಲ. ಹೊಸ ಕಟ್ಟಡಗಳಿಗೆ ಯಾವ ಕಂಪೆನಿ ದೇಣಿಗೆ ನೀಡುತ್ತಿದೆ ಎಂದು ವಿಚಾರಿಸಿದರೆ ಹೇಳುವವರಿಲ್ಲ. ಎಷ್ಟು ಅನುದಾನ ಬರುತ್ತಿದೆ ಎಂದು ಕೇಳಿದರೆ ಯಾರು ಕೂಡ ಬಾಯಿಯೇ ಬಿಡುತ್ತಿಲ್ಲ. ಯೋಜನೆಯ ನೀಲನಕ್ಷೆಯೇ ಇಲ್ಲ. ಕಾಮಗಾರಿಯ ಕಾರ್ಯಾದೇಶವಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಇದ್ಯಾವುದು ಶಾಲೆಯ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಗಮನಕ್ಕೆ ಬಂದಿಲ್ಲ... ಇಷ್ಟಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಶ್ರೀಕಂಠ ಅವರು ಇತ್ತೀಚೆಗೆ ಶಾಲೆಯ ಮುಖ್ಯ ಶಿಕ್ಷಕರಿಗೆ, ಬುಧವಾರ (ಜೂನ್‌ 21) ಶಾಲಾ ಕಟ್ಟಡ ಕೆಡವಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದು ಕೂಡ ಫೋನ್‌ನಲ್ಲಿ ಮೌಖಿಕವಾಗಿ!

ADVERTISEMENT

ಈ ಶಾಲೆಯ ಜಾಗ ದಾನವಾಗಿ ಬಂದು 57 ವರ್ಷಗಳೇ ಕಳೆದರೂ ಆ ಆಸ್ತಿಯ ಸಂರಕ್ಷಣೆಗೆ ಕಾಳಜಿ ಮಾಡದವರು, ಸಂಶಯದ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸುವ ಅಧಿಕಾರಿಗಳೆಲ್ಲ, ಇದೀಗ ಏಕಾಏಕಿ ‘ಅಭಿವೃದ್ಧಿ’ಯ ನೆಪದಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೆ ಶಾಲಾ ಕಟ್ಟಡ ಕೆಡವಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಸಂದೇಹ ಹುಟ್ಟು ಹಾಕಿದೆ.

ಈ ವಿಚಾರದಲ್ಲಿ ಎಸ್‌.ಗೊಲ್ಲಹಳ್ಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಸುನೀಲ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕಳೆದ ಏಪ್ರಿಲ್ 3ರಂದು ‘ಪ್ರಜಾವಾಣಿ’ ವರದಿಗಾರ ಶಾಲೆಗೆ ಭೇಟಿ ನೀಡಿದ್ದ ಹೊತ್ತಿನಲ್ಲಿಯೇ ಸುನೀಲ್ ಅವರು ಕೆಲ ಕಾರ್ಮಿಕರನ್ನು ಕರೆತಂದು, ಶಾಲೆ ಕಟ್ಟಡ ಕೆಡವಲು ಮುಂದಾಗಿದ್ದು ಕಂಡುಬಂದಿತ್ತು. ಶಾಲೆಯ ಮುಖ್ಯ ಶಿಕ್ಷಕ ಶ್ರೀನಾಥ್ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕಟ್ಟಡ ನೆಲಸಮಗೊಳಿಸುವ ಕಾರ್ಯ ನಿಂತಿತ್ತು. ಈ ಬಗ್ಗೆ ವಿಚಾರಿಸಿದರೆ, ಬಿಇಒ ಎನ್.ಶ್ರೀಕಂಠ ಅವರು ‘ಆ ವಿಚಾರವೇ ನನಗೆ ಗೊತ್ತಿಲ್ಲ’ ಎಂದು ತಿಳಿಸಿದ್ದರು.

ಎಸ್‌ಡಿಎಂಸಿ ಲೆಕ್ಕಕ್ಕೇ ಇಲ್ಲ!: ಶಾಲೆಯ ಆಗುಹೋಗುಗಳ ಮೇಲೆ ನಿಗಾ ಇಡುವುದಕ್ಕಾಗಿಯೇ ಸರ್ಕಾರ ಎಸ್‌ಡಿಎಂಸಿ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಈ ಶಾಲೆಯಲ್ಲಿ ಎಸ್‌ಡಿಎಂಸಿ ನಾಮಕಾವಾಸ್ತೆಯಂತಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಕಾಳಜಿ ಮಾಡಬೇಕಾದ ಸಿಆರ್‌ಪಿಯ ತೀರ್ಮಾನವೇ ಸದ್ಯ ಎಸ್‌ಡಿಎಂಸಿ ಮತ್ತು ಈ ಊರಿನ ತೀರ್ಮಾನದಂತಿದೆ! ಇದು ಎಸ್‌ಡಿಎಂಸಿಯ ಅನೇಕ ಸದಸ್ಯರಿಗೆ ಬೇಸರ ತರಿಸಿದೆ.

‘ಶಿಕ್ಷಕರ ಕಾರ್ಯವೈಖರಿ ಮೇಲೆ ನಿಗಾ ಇಡಬೇಕಾದ ಸಿಆರ್‌ಪಿ ತನ್ನ ಕೆಲಸ ಬಿಟ್ಟು ಕಚೇರಿ, ಕಚೇರಿಗಳಿಗೆ ಅಲೆದಾಡಿ, ರಾಜಕಾರಣಿಗಳ ಸುತ್ತ ಸುಳಿದಾಡಿ, ಶಾಲಾ ಕಟ್ಟಡ ಒಡೆಸಲು ಅಧಿಕಾರಿಗಳ ಮೇಲೆ ಒತ್ತಡ ತರುವುದು, ಕಟ್ಟಡ ನಿರ್ಮಾಣ ಕಾಮಗಾರಿಗೆ ಆತುರ ತೋರಿಸುವುದು ನೋಡಿದರೆ ಹಲವು ಸಂಶಯ ಹುಟ್ಟಿಕೊಳ್ಳುತ್ತಿವೆ’ ಎನ್ನುತ್ತಾರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪರೆಡ್ಡಿ.

‘ಸಿಆರ್‌ಪಿ ಸುನೀಲ್‌ ನಮಗೆ ಏನೂ ಹೇಳುವುದಿಲ್ಲ. ಕಟ್ಟಡ ಕಟ್ಟಿಸುವ ವಿಚಾರದಲ್ಲಿ ಎಲ್ಲ ಕಚೇರಿಗಳಿಗೂ ತಾವೇ ಮುಂದಾಗಿ ಓಡಾಡುತ್ತಿದ್ದಾರೆ. ನಮಗೂ ಅಷ್ಟಾಗಿ ಗೊತ್ತಾಗುವುದಿಲ್ಲ ಎಂದು ಸುಮ್ಮನಿದ್ದೆವು. ಇದೀಗ ನಮಗೆ ಹೇಳದೆ ಶಾಲೆಯ ಕಟ್ಟಡ ಒಡೆದು ಹಾಕಲು ಹೊರಟಿದ್ದಾರೆ. ಸಮಿತಿ ಗಮನಕ್ಕೆ ತರದೆ, ಇಂತಹ ನಿರ್ಧಾರ ತೆಗೆದುಕೊಳ್ಳಲು ಇವರು ಯಾರು’ ಎಂದು ಪ್ರಶ್ನಿಸಿದರು.

‘ಶಾಲೆಯ ರಜಾ ಕಾಲದಲ್ಲಿ ನಿರ್ಮಾಣ ಕೆಲಸ ನಡೆಯಬೇಕು. ಮಳೆಗಾಲದಲ್ಲಿ ಕಟ್ಟಡ ಒಡೆದು ಹಾಕಿದರೆ ಶಾಲೆ ನಡೆಯುವುದು ಹೇಗೆ? ಅಷ್ಟಕ್ಕೂ ಇಂತಹದೊಂದು ಮಹತ್ವದ ವಿಚಾರವನ್ನು ಈವರೆಗೆ ಎಸ್‌ಡಿಎಂಸಿ ಗಮನಕ್ಕೆ ಏಕೆ ತಂದಿಲ್ಲ? ನಾಳೆ ನಡೆಯುವ ಸಭೆಯಲ್ಲಿ ದಾನಿಗಳು ಯಾರು? ಎಷ್ಟು ಹಣ ಕೊಡುತ್ತಿದ್ದಾರೆ? ಏನೇನು ಅಭಿವೃದ್ಧಿಪಡಿಸುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ಸಭೆಯ ಮುಂದಿಡಲಿ. ಬಳಿಕ ನಾವು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಸ್ಪಷ್ಟ ಮಾಹಿತಿ ಇಲ್ಲ!
ಯಾರು, ಎಷ್ಟು ವೆಚ್ಚದಲ್ಲಿ ಹೊಸ ಶಾಲಾ ಕಟ್ಟಡ ಕಟ್ಟುತ್ತಾರೆ ಎನ್ನುವ ಬಗ್ಗೆ ಈ ಹಿಂದೆ ಬಿಇಒ, ಡಿಡಿಪಿಐ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಕೇಳಿದಾಗ ಮಾಹಿತಿ ಲಭ್ಯವಾಗಿರಲಿಲ್ಲ. ತಿಳಿದುಕೊಳ್ಳಲು ಕರೆ ಮಾಡಿದರೆ ಬಿಇಒ ಕರೆ ಸ್ವೀಕರಿಸಲಿಲ್ಲ. ಡಿಡಿಪಿಐ ಅಶ್ವತ್ಥರೆಡ್ಡಿ ಅವರು, ‘ನನಗೆ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ’ ಎಂದು ಪುನರುಚ್ಚರಿಸಿದರು.

ಯಾರದು ಸುಳ್ಳು?
ಸಿಆರ್‌ಪಿ ಸುನೀಲ್ ಅವರಿಂದ ಮಾಹಿತಿ ಕೇಳಿದರೆ, ‘ನನಗೆ ಯಾರು ದೇಣಿಗೆ ನೀಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ರೋಟರಿ ಸಂಸ್ಥೆಯವರು ದೇಣಿಗೆ ನೀಡುತ್ತಿದ್ದಾರೆ ಎಂದು ಬಿಇಒ ಕಚೇರಿಯಿಂದ ಎಸ್‌.ಗೊಲ್ಲಹಳ್ಳಿ ಶಾಲೆಗೆ ಮಾಹಿತಿ ಕಳುಹಿಸಿದ್ದಾರೆ’ ಎಂದು ಉತ್ತರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಶ್ರೀನಾಥ್ ಅವರಿಗೆ ವಿಚಾರಿಸಿದರೆ, ‘ನಮಗೆ ಈವರೆಗೆ ದಾನಿಗಳು, ಅನುದಾನ, ಕಟ್ಟುವ ಕಟ್ಟಡದ ಮಾಹಿತಿ ಬಂದಿಲ್ಲ’ ಎಂದು ಹೇಳಿದರು.

ತಗಾದೆ ತೆಗೆದವನೇ ಮೊದಲು ಬಂದ!
ಶಾಲೆ ಜಾಗ ನಮಗೆ ಸೇರಬೇಕೆಂದು ತಗಾದೆ ತೆಗೆದಿದ್ದ ದಾನಿಗಳ ಮೊಮ್ಮಗನೊಬ್ಬ ಇದೀಗ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆ ಸಿಗುವ ಭರವಸೆ ದೊರೆಯುತ್ತಿದ್ದಂತೆ ವರಸೆ ಬದಲಿಸಿ, ಶಾಲೆ ಕಟ್ಟಡ ಕೆಡವಲು ಮುಂದೆ ಬಂದಿದ್ದಾನೆ ಎಂದು ತಿಳಿದು ಬಂದಿದೆ. ಬುಧವಾರ ಶಾಲೆ ಕಟ್ಟಡ ಕೆಡವುತ್ತೇವೆ. ಶನಿವಾರ ಶಾಸಕರು ಬಂದು ಶಂಕುಸ್ಥಾಪನೆ ಮಾಡುತ್ತಾರೆ ಎಂದು ಹೇಳಿಕೊಂಡು ತಿರುಗುತ್ತಿರುವ ಆ ವ್ಯಕ್ತಿಗೆ ಸರ್ಕಾರಿ ವ್ಯವಸ್ಥೆಯೊಳಗೆ ಮೂಗು ತೂರಿಸಲು ಏನು ಹಕ್ಕಿದೆ ಎನ್ನುವ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಜಿಲ್ಲಾಡಳಿತ ಗಮನ ಹರಿಸಲಿ
‘ಒಂದೊಮ್ಮೆ ಶಾಲೆಗೆ ಹೊಸ ಕಟ್ಟಡ ಕಟ್ಟಿಸುವುದಾದರೆ ದಾನಿಗಳು ನೀಡುವ ಹಣವನ್ನೆಲ್ಲ ಎಸ್‌ಡಿಎಂಸಿ ಖಾತೆಗೆ ಸಂದಾಯ ಮಾಡಬೇಕು. ಬಳಿಕ ನಿರ್ಮಿತಿ ಕೇಂದ್ರದ ಮೂಲಕವೋ ಅಥವಾ ಸಮಿತಿ ಟೆಂಡರ್‌ ಕರೆದು ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಬೇಕು. ಅದು ಬಿಟ್ಟು ಸಿಆರ್‌ಪಿಯೋ, ಮತ್ತಿನ್ಯಾರೋ ತಮಗೆ ತಿಳಿದಂತೆ ವ್ಯವಹರಿಸಲು ಬಿಡಬಾರದು.

ಈ ವಿಚಾರವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ, ಅಕ್ರಮಕ್ಕೆ ಅವಕಾಶವಿಲ್ಲದಂತೆ, ಪಾರದರ್ಶಕ ಕೆಲಸ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಆಗ್ರಹಿಸಿದರು.

* * 

ಅನೇಕ ಸಿಆರ್‌ಪಿಗಳು ಕೆಲಸ ಬಿಟ್ಟು ಹಣ ಮಾಡುವುದನ್ನೇ ದಂಧೆ ಮಾಡಿಕೊಂಡು ಕೋಟಿಗಟ್ಟಲೇ ಆಸ್ತಿ ಸಂಪಾದಿಸುತ್ತಿದ್ದಾರೆ. ಅಂತಹವರ ಮೇಲೆ ಎಸಿಬಿ ಕಣ್ಣಿಡಬೇಕು
ರಘುರಾಮ್‌,
ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.