ADVERTISEMENT

ಸರ್ಕಾರಿ ಅನುದಾನ: ದುರ್ಬಳಕೆ ಬೇಡ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 7:30 IST
Last Updated 19 ಮಾರ್ಚ್ 2011, 7:30 IST

ಚಿಕ್ಕಬಳ್ಳಾಪುರ: ಸರ್ಕಾರದ ಹಣವನ್ನು ದುರ್ಬಳಕೆ ಮಾಡದೇ ಉತ್ತಮ ಕಾರ್ಯಗಳಿಗೆ ಸದ್ಬಳಕೆ ಮಾಡಬೇಕು. ಕಾರ್ಯಗಳತ್ತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೇ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.ಮಂಡಿಕಲ್ ಹೋಬಳಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾವು ಮಾಡುವ ಕಾರ್ಯಗಳಿಂದ ಬೇರೆಯವರಿಗೆ ಒಳಿತು ಆಗಬೇಕೆ ಹೊರತು ಕೆಡಕು ಆಗಬಾರದು’ ಎಂದರು.

‘ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ರಸ್ತೆ ಹದಗೆಟ್ಟಿರುವುದು ಮತ್ತು ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ರೂ.2.36 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೇ ಇತರ ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.‘ಮುಖ್ಯರಸ್ತೆಯಿಂದ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ನಿವಾಸಿಗಳಿಗೆ ಉತ್ತಮ ಸೌಕರ್ಯ ಕಲ್ಪಿಸುವುದು ಅಭಿವೃದ್ಧಿ ಕಾಮಗಾರಿ ಮುಖ್ಯ ಉದ್ದೇಶ’ ಎಂದರು.

ರಾಷ್ಟ್ರೀಯ ಹೆದ್ದಾರಿ-7ರಿಂದ ಸಾದಲಿ ರಸ್ತೆ, ಗುಡಿಬಂಡೆ ರಸ್ತೆಯಿಂದ ಚೊಕ್ಕನಹಳ್ಳಿ, ರಾಮಪಟ್ಟಣದಿಂದ ಸಿದ್ದಗಾನಹಳ್ಳಿ ರಸ್ತೆಗೆ ಗುದ್ದಲಿ ಪೂಜೆ ನಡೆಯಿತು.ಜೆಡಿಎಸ್ ಮುಖಂಡ ಕೆ.ಟಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ರವೀಂದ್ರರೆಡ್ಡಿ, ತಾ.ಪಂ.ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ವೆಂಕಟಣಾರಾಯಣ, ಮಾಜಿ ಸದಸ್ಯ ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ, ಜೆಡಿಎಸ್ ಮುಖಂಡರಾದ ಕೆ.ಟಿ.ನಾರಾಯಣಸ್ವಾಮಿ, ಚಿನ್ನಪ್ಪ, ವೆಂಕಟರೆಡ್ಡಿ, ರಾಜಣ್ಣ, ದೇವರಾಜು, ಬೈರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.