ADVERTISEMENT

ಸೂರ್ಯ ಕಾಣಸಿಗದೆ ಆವರಿಸಿತು ಮೋಡ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 7:45 IST
Last Updated 19 ಜೂನ್ 2012, 7:45 IST

ಶಿಡ್ಲಘಟ್ಟ: ಬೀಸುವ ಚಳಿಗಾಳಿ, ಕವಿದ ಮೋಡ, ಮಳೆ ಈಗಲೋ ಆಗಲೋ ಬರುವಂತಿದ್ದರೂ ಬರುತ್ತಿಲ್ಲ. ಇದು ತಾಲ್ಲೂಕಿನಲ್ಲಿ ಸೋಮವಾರ ಇದ್ದಕ್ಕಿದ್ದಂತೆ ಬದಲಾದ ಹವಾಮಾನ. ಇದುವರೆಗೂ ಬಿರು ಬಿಸಿಲಿನಲ್ಲಿ ದಿನದೂಡಿದ್ದ ಎಲ್ಲರನ್ನೂ ಬದಲಾದ ವಾತಾವರಣ ಅಚ್ಚರಿಗೆ ನೂಕಿತ್ತು.

ಬೆಳಿಗ್ಗೆ ಸೂರ್ಯನ ದರ್ಶನವಾಗದೆ ಬೀಸುವ ಗಾಳಿಗೆ ಆರೋಗ್ಯ ಹದಗೆಟ್ಟರೆ ಎಂಬ ಭಯದಿಂದ ಶಾಲಾ ಮಕ್ಕಳಿಗೆ ಟೊಪ್ಪಿ ಮತ್ತು ಸ್ವೆಟರನ್ನು ಹಾಕಿ ಪೋಷಕರು ಕರೆದೊಯ್ಯುತ್ತಿದ್ದರು. ಬರೀ ಗಾಳಿ ಬೀಸಿದರೆ ಮಳೆ ಆಗುವುದಿಲ್ಲ. ಮಳೆ ಬರದಿದ್ದರೆ ನಮ್ಮ ಗತಿಯೇನು ಎಂಬ ಆತಂಕ ರೈತರ ಮನದಲ್ಲಿ ಹೊಯ್ದಾಡುತ್ತಿತ್ತು.

ಆಗಸವೆಲ್ಲ ಬೂದಿ ಬಣ್ಣದಿಂದ ಮಬ್ಬಾದ ಮೋಡಗಳಿಂದ ಆವರಿಸಿಕೊಂಡಿದ್ದರೆ, ಜೋರಾಗಿ ಬೀಸುವ ಗಾಳಿಗೆ ದೂಳು ಬೀಳದಂತೆ ಮುಖಕ್ಕೆ ಕೈ ಅಡ್ಡ ಹಿಡಿದು ಚಲಿಸುವ ಸ್ಥಿತಿ ಜನರದ್ದಾಗಿತ್ತು. ರೇಷ್ಮೆ ಕಾರ್ಮಿಕರಲ್ಲಿ ಹೆಚ್ಚಿನವರು ಆಸ್ತಮಾ ಪೀಡಿತರಾಗಿದ್ದು, ಬದಲಾದ ಹವಾಮಾನ ಅವರ ಕಾಯಿಲೆಯನ್ನು ಹೆಚ್ಚಿಸುತ್ತದೆ. ಮೋಡ ಮುಚ್ಚಿರುವ ವಾತಾವರಣದಲ್ಲಿ ಕಟ್ಟುವ ರೇಷ್ಮೆ ಗೂಡಿನ ಇಳುವರಿ ಕಡಿಮೆಯಾಗುವುದರಿಂದ ಗೂಡಿನ ಬೆಲೆಯೂ ಇಳಿಮುಖವಾಗುತ್ತದೆ. ಇತ್ತ ಮಳೆಯೂ ಬರದೆ ಅತ್ತ ಬಿಸಿಲೂ ಇರದ ಅತಂತ್ರ ಹವಾಮಾನವು ರೈತರನ್ನು ತ್ರಿಶಂಕು ಸ್ಥಿತಿಗೆ ತಂದು ನಿಲ್ಲಿಸಿದೆ.

ಮಂಕು ಬಡಿದಂತಿರುವ ಹವಾಮಾನದಿಂದ ಜನರ ಓಡಾಟವೂ ಕಡಿಮೆಯಾಗಿದ್ದು, ಅಂಗಡಿ- ಮುಂಗಟ್ಟುಗಳ ವ್ಯಾಪಾರವೂ ಕುಂಠಿತವಾಗಿದ್ದರೆ, ಸೋಮವಾರ ನಡೆಯುವ ಶಿಡ್ಲಘಟ್ಟದ ಸಂತೆಯೂ ಹೆಚ್ಚಿನ ವ್ಯಾಪಾರ ವಹಿವಾಟನ್ನು ಕಾಣಲಿಲ್ಲ. ಗಾಳಿಯಿಂದಾಗಿ ಸಂತೆಯಲ್ಲಿ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯನ್ನು ಕಟ್ಟಿಕೊಂಡು ರಸ್ತೆ ಬದಿ ವ್ಯಾಪಾರ ಮಾಡುವವರು ದೂಳು, ಗಾಳಿಯಿಂದ ಪರದಾಡುವಂತಾಯಿತು.

`ಮಳೆಯಾದರೂ ಬಂದರೆ ಭೂಮಿ ತಂಪಾಗಿ ರೈತರಿಗೆ ಜೀವ ಬಂದಂತಾಗುತ್ತದೆ. ಕೇವಲ ಮೋಡ ಮುಚ್ಚಿಕೊಂಡು ಗಾಳಿ ಬೀಸುತ್ತಿದ್ದರೆ ಪ್ರಯೋಜನವಿಲ್ಲ. ಈ ರೀತಿಯ ಹವಾಮಾನ ಬದಲಾವಣೆಯಿಂದ ಜನರಲ್ಲಿ ಕಾಯಿಲೆಯೂ ಹೆಚ್ಚುತ್ತದೆ, ರೈತರಿಗೆ ತೊಂದರೆ. ಆದಷ್ಟು ಬೇಗ ಕವಿದಿರುವ ಮೋಡ ಮಳೆ ಸುರಿಸಲಿ~ ಎಂದು ರೈತರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.