ADVERTISEMENT

ಸೌಲಭ್ಯವಂಚಿತ ಶಂಭುಕನಗರದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:55 IST
Last Updated 13 ಜುಲೈ 2012, 9:55 IST
ಸೌಲಭ್ಯವಂಚಿತ ಶಂಭುಕನಗರದ ಗ್ರಾಮಸ್ಥರು
ಸೌಲಭ್ಯವಂಚಿತ ಶಂಭುಕನಗರದ ಗ್ರಾಮಸ್ಥರು   

ಗೌರಿಬಿದನೂರು: ತಾಲ್ಲೂಕಿನ ಇಡಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಶಂಭುಕನಗರ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1985ರಲ್ಲಿ ನಡೆದ ಎಚ್.ನಾಗಸಂದ್ರ ಭೂ ಚಳವಳಿಯ ಫಲವಾಗಿ ಜನ್ಮತಾಳಿದ ಗ್ರಾಮವಿದು. ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಗ್ರಾಮದಲ್ಲಿ ಸಕಲ ಸೌಕರ್ಯಗಳು ಲಭ್ಯವಾಗುತ್ತದೆ ಎಂಬ ನಿರೀಕ್ಷೆ ಗ್ರಾಮಸ್ಥರಿಗೆ ಇತ್ತು.
 
ಆದರೆ ಇಲ್ಲಿ ವಾಸವಿರುವ ಬಹುತೇಕ ಗ್ರಾಮಸ್ಥರಿಗೆ ಸಮರ್ಪಕವಾದ ವಸತಿ ಸೌಕರ್ಯವೇ ಇಲ್ಲ. ಬಿರುಕು ಬಿಟ್ಟಿರುವ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಿದ್ದಾರೆ.

ಸುಮಾರು 28 ವರ್ಷಗಳ ಹಿಂದೆ ನಡೆದ ಹೋರಾಟದ ಪರಿಣಾಮವಾಗಿ ಎರಡು ಎಕರೆಯಷ್ಟು ಸರ್ಕಾರಿ ಜಮೀನನ್ನು ಭೂರಹಿತ 100 ದಲಿತ ಕುಟುಂಬಗಳಿಗೆ ನೀಡಲಾಯಿತು. ಗ್ರಾಮದಲ್ಲಿ ಸಕಲ ಸೌಕರ್ಯಗಳು ಲಭ್ಯವಾಗಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿತ್ತು. ಆದರೆ ಇದುವರೆಗೆ ಗ್ರಾಮಕ್ಕೆ ಯಾವುದೇ ಸೌಕರ್ಯಗಳು ಲಭ್ಯವಾಗಿಲ್ಲ. ಗ್ರಾಮದಲ್ಲಿ ಕಣ್ಣು ಹಾಯಿಸಿದ ಕಡೆಯಲೆಲ್ಲ ಗಲೀಜು, ಮಾಲಿನ್ಯತೆಯಿದ್ದು ರೋಗ ಹರಡುವ ಆತಂಕ ಗ್ರಾಮಸ್ಥರಲ್ಲಿ ಆವರಿಸಿದೆ.

`ಪರಿಶಿಷ್ಟ ಜಾತಿಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮದಲ್ಲಿ ವಾಸವಿದ್ದಾರೆ. ಮೂರು ದಶಕಗಳಾಗುತ್ತ ಸಮೀಪಿಸಿದರೂ ನಮ್ಮ ರಸ್ತೆಗಳು ಇನ್ನೂ ಡಾಂಬರೀಕರಣಗೊಂಡಿಲ್ಲ. ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುವುದಿಲ್ಲ. ಸ್ವಚ್ಛತೆ ಕೂಡ ಇಲ್ಲ. ಚರಂಡಿಯಲ್ಲಿ ಯಾವಾಗಲೂ ನೀರು ನಿಂತಿರುತ್ತದೆ ಮತ್ತು ದುರ್ನಾತ ಬೀರುತ್ತದೆ. ಮಕ್ಕಳು ಅಲ್ಲಿಯೇ ಆಟವಾಡುತ್ತ ಇರುತ್ತಾರೆ. ಅವರು ಬೇಗನೇ ಅನಾರೋಗ್ಯಕ್ಕೀಡಾಗುತ್ತಾರೆ. ದುಡಿದ ಎಲ್ಲ ಹಣವನ್ನು ಆಸ್ಪತ್ರೆಗೆ ಸುರಿಯಬೇಕಾಗುತ್ತದೆ~ ಎಂದು ಗ್ರಾಮದ ನಿವಾಸಿ ಜಯರಾಮ `ಪ್ರಜಾವಾಣಿ~ಗೆ ತಿಳಿಸಿದರು.

`28 ವರ್ಷಗಳಾದರೂ ಗ್ರಾಮದಲ್ಲಿ ಇನ್ನೂ ಸ್ವಂತ ಅಂಗನವಾಡಿ ಕಟ್ಟಡವಿಲ್ಲ. ಸಮುದಾಯ ಭವನದಲ್ಲಿ 20 ಮಕ್ಕಳಿಗೆ ಪಾಠ-ಪ್ರವಚನ ಮಾಡಲಾಗುತ್ತದೆ. ಮನೆಗಳು ಬಿರುಕು ಬಿಡುತ್ತಿದ್ದು, ಮನೆಗಳಲ್ಲಿ ಸುರಕ್ಷಿತವಾಗಿ ಇರಲು ಹೆದರಿಕೆಯಾಗುತ್ತದೆ. ಒಂದೊಂದು ಮನೆಯಲ್ಲಿ ಎರಡು-ಮೂರು ಕುಟುಂಬಗಳು ವಾಸಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಮನೆ ಮತ್ತು ನಿವೇಶನ ಸೌಲಭ್ಯಗಳಿಲ್ಲದೇ ವಂಚಿತರಾಗಿದ್ದಾರೆ.
 
ಇರುವ ಅಲ್ಪಸ್ವಲ್ವ ಸೌಕರ್ಯಗಳಲ್ಲೇ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ~ ಎಂದು ಅವರು ತಿಳಿಸಿದರು.
`ಅಗತ್ಯ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಬಡ ಕುಟುಂಬಗಳ ಸದಸ್ಯರು ಮನೆಯ ಹಿತ್ತಲಿನಲ್ಲಿ ತೆಂಗಿನ ಮರದ ಗರಿಗಳಿಂದ ತಡಿಕೆಗಳನ್ನು ಅಡ್ಡ ಕಟ್ಟಿಕೊಂಡು ಸ್ನಾನ ಮಾಡುತ್ತಾರೆ. ಶೌಚಾಲಯ ಇಲ್ಲದ ಕಾರಣ ಬಹಿರ್ದೆಸೆಗೆ ಬಯಲಿಗೆ ಹೋಗಬೇಕು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದರೂ ಆವರಣದಲ್ಲಿ ದನಕರುಗಳೇ ಹೆಚ್ಚಿರುತ್ತವೆ. ಕೊಳವೆಬಾವಿಗಳು ಬತ್ತುತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಮ್ಮ ಸಮಸ್ಯೆಗಳನ್ನು ಯಾರೂ ಕೇಳುವವರೇ ಇಲ್ಲ~ ಎಂದು ಗ್ರಾಮದ ನಿವಾಸಿ ನರಸಿಂಹ ಬೇಸರ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.