ADVERTISEMENT

‘ಅಧಿಕಾರಿಗಳ ನಿರ್ಲಕ್ಷ್ಯ, ನಿರಾಸಕ್ತಿ ಸಹಿಸಲ್ಲ’

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:03 IST
Last Updated 13 ಡಿಸೆಂಬರ್ 2013, 9:03 IST

ಚಿಕ್ಕಬಳ್ಳಾಪುರ: ‘ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಮತ್ತು ಪ್ರಗತಿ ಪರಿಶೀಲನಾ ಸಭೆಗಳನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು ಬೇಕೆಂದೇ ನಿರ್ಲಕ್ಷ್ಯ ತೋರುತ್ತಿದ್ದು, ಈ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಸಮಸ್ಯೆಗಳು ಯಥಾ­ಸ್ಥಿತಿಯಲ್ಲೇ ಉಳಿಯುತ್ತವೆ ಹೊರತು ಯಾವುದೇ ಪ್ರಗತಿ ಕಾರ್ಯಗಳು ನೆರ­ವೇರುವುದಿಲ್ಲ. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಸಭೆಗೆ ಬರುವ ಅಗತ್ಯ­ವಿಲ್ಲ‘ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಆರಂಭಗೊಳ್ಳುತ್ತಿದ್ದಂತೆಯೇ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವಿವರಗಳನ್ನು ನೀಡಿ ಸಭಾಂಗಣದಿಂದ ಹೊರ­ಹೋಗುತ್ತಿರುವುದನ್ನು ಕಂಡು ಸಿಟ್ಟಿಗೆದ್ದ ಅವರು, ‘ಕೇಳಿದ್ದಕ್ಕೆಲ್ಲ ಉತ್ತರ ನೀಡಿ ಹೀಗೆ ಸಭೆಯಿಂದ ಹೊರಟುಬಿಟ್ಟರೆ ಏನೂ ಪ್ರಯೋಜನ? ನಾವು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನೂ ನೀಡುವುದಿಲ್ಲ.

ಸಭೆಯಲ್ಲಿ ಕೂತುಕೊಳ್ಳುವಷ್ಟು ತಾಳ್ಮೆಯಿರದಿದ್ದರೆ ಹೇಗೆ? ನೀವು ಕೆಲಸದಿಂದ ಯಾವಾಗ ಬಿಡುವು ಇರುತ್ತೀರಿ ಎಂಬುದನ್ನು ಅರಿತು ಸಭೆ ಆಯೋಜಿಸಬೇಕೆ’ ಎಂದು ಖಾರವಾಗಿ ಪ್ರಶ್ನಿಸಿದರು. ಸಭೆಯಿಂದ ಹೊರ ಹೋಗುತ್ತಿದ್ದ ಅಧಿಕಾರಿಯೊಬ್ಬರನ್ನು ಹೋಗ­ದಂತೆ ತಾಕೀತು ಮಾಡಿದರು. ಸಭೆ ಕಡೆ ಗಮನವಿರಲಿ ಎಂದು ಎಚ್ಚರಿಸಿದರು.

ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ‘ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಯಾವುದೇ ಅನುದಾನ ಸದ್ಬಳಕೆ ಮಾಡಿಕೊಳ್ಳ­ಬೇಕಿದ್ದರೂ ಅಥವಾ ಪಂಚಾಯಿತಿ ವ್ಯಾಪ್ತಿಯ ಕಾರ್ಯ ನಡೆಯಬೇಕಿದ್ದರೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ, ಇಲ್ಲವೇ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಗಮನಕ್ಕೆ ತರಬೇಕು.

ಅದ್ಯಾವು­ದನ್ನೂ ಮಾಡದೆ ತಮ್ಮಷ್ಟಕ್ಕೆ ತಾವೇ ಕಡತಗಳಲ್ಲಿ ಮತ್ತು ದಾಖಲೆ ಪತ್ರಗಳಲ್ಲಿ ದಾಖಲಿಸಿಕೊಂಡರೆ ನಮಗೆ ಹೇಗೆ ಗೊತ್ತಾಗಬೇಕು? ಜಿಲ್ಲಾ ಪಂಚಾ­ಯಿತಿಗೆ ಬಂದಿರುವ ಅನುದಾನ ಏನಾಯಿತು? ಅದರಿಂದ ಯಾರಿಗೆ ಪ್ರಯೋಜನವಾಗಿದೆ ಎಂಬು­ದರ ಬಗ್ಗೆ ಮಾಹಿತಿಯೂ ನಮಗೆ ಇರುವುದಿಲ್ಲ‘ ಎಂದರು.

ಇನ್ಮುಂದೆ ಜಿಲ್ಲಾ ಪಂಚಾಯಿತಿಗೆ ಸಂಬಂಧಿ­ಸಿದಂತೆ ಯಾವುದೇ ಕಾರ್ಯಗಳನ್ನು ಅಥವಾ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದ್ದರೆ ಮೊದಲು ಜಿಲ್ಲಾ ಪಂಚಾಯಿತಿಯ ಗಮನಕ್ಕೆ ತರಬೇಕು. ನೇರವಾಗಿ ಮಾಹಿತಿ ನೀಡಲಾಗ­ದಿದ್ದರೆ, ಕನಿಷ್ಠ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕವಾದರೂ ನಮಗೆ ಮಾಹಿತಿ ದೊರೆಯುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಇಲಾಖೆಯ ಈಚಿನ ಪ್ರಗತಿ ಬಗ್ಗೆ ವಿವರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ­ಧಿಕಾರಿ ಡಾ.ಎಚ್.ವಿ.ರಂಗಸ್ವಾಮಿ, ‘ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ 1ಸಾವಿರ ಮಂದಿ ಗಂಡು ಮಕ್ಕಳಿದ್ದರೆ, 923 ಹೆಣ್ಣು ಮಕ್ಕಳಿದ್ದಾರೆ. ಈ ಬೆಳವಣಿಗೆ ಸಮಾಜದ ಜತೆಗೆ ಕೌಟಂಬಿಕ ವ್ಯವಸ್ಥೆ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಗಂಡು ಮಗುವಿಗೆ ನೀಡಿದಷ್ಟೇ ಆದ್ಯತೆಯನ್ನು ಹೆಣ್ಣು ಮಗುವಿಗೂ ಸಹ ನೀಡಬೇಕೆಂದು ಜನರಲ್ಲಿ ಅರಿವು ಮೂಡಿಸು­ತ್ತಿದ್ದೇವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದ್ದು, ಇದರ ಬಗ್ಗೆ ನಿಗಾ ವಹಿಸುತ್ತಿ­ದ್ದೇವೆ. ಜನರು ನೀಡಿರುವ ದೂರು ಮತ್ತು ನಮಗೆ ಲಭ್ಯವಾಗುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ನಕಲಿ ವೈದ್ಯರನ್ನು ಸೆರೆ ಹಿಡಿಯುತ್ತಿದ್ದೇವೆ. ನಕಲಿ ಪ್ರಮಾಣಪತ್ರ, ಪದವಿ ಗಳಿಸಿದ ಚಿಕಿತ್ಸಾ ಪದ್ಧತಿ ಬಿಟ್ಟು ಬೇರೆಯದ್ದೇ ಚಿಕಿತ್ಸಾ ಪದ್ಧತಿ ಅನುಸರಿಸುತ್ತಿರುವುದು ಗಮನಕ್ಕೆ ಬಂದರೆ, ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಎಲ್‌.ಪ್ರಕಾಶ್‌ ಮಾತನಾಡಿ, ‘ಕಾಲು­ಬಾಯಿ ರೋಗ ಹರಡದಂತೆ ನಿಯಂತ್ರಿಸಲು ಮತ್ತು ರಾಸುಗಳು ಸಾವನ್ನಪ್ಪದಂತೆ ತಡೆಯಲು ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ. ಚಿಂತಾ­ಮಣಿ ಮತ್ತು ಶಿಡ್ಲಘಟ್ಟ ಹೊರತುಪಡಿಸಿ ಎಲ್ಲ ತಾಲ್ಲೂಕು­ಗಳಲ್ಲೂ ರಾಸು ಕಳೆದುಕೊಂಡ ರೈತರಿಗೆ ಪರಿಹಾರ ಧನ ವಿತರಿಸಲಾಗಿದೆ. ಉಳಿದೆ­ರಡು ತಾಲ್ಲೂಕುಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಧನ ವಿತರಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್‌ ಪ್ರಸಾದ್‌, ಕೃಷಿ ಇಲಾಖೆ ಉಪನಿರ್ದೇಶಕ ಎ.ರಾಮದಾಸ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್‌ ಮತ್ತಿತರರು ಇಲಾಖೆಯ ಪ್ರಗತಿ ವಿವರಣೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ್ಯ ಪಿ.ವಿ.ರಾಘವೇಂದ್ರ ಹನುಮಾನ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.