ADVERTISEMENT

‘ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:10 IST
Last Updated 17 ಸೆಪ್ಟೆಂಬರ್ 2013, 9:10 IST

ಗುಡಿಬಂಡೆ: ಬಯಲುಸೀಮೆ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಲು ಉದ್ಧೇಶಿಸಿರುವ ಎತ್ತಿನಹೊಳೆ ಯೋಜನೆ ಸಂಪೂರ್ಣ­ವಾಗಿ ಅವೈಜ್ಞಾನಿಕತೆಯಿಂದ ಕೂಡಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ತಾಲ್ಲೂಕು ಸಮಾವೇಶದಲ್ಲಿ ಮಾತ­ನಾಡಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕುತಂತ್ರದಿಂದ ಕೇವಲ 7ರಿಂದ 8 ಟಿಎಂಸಿ ನೀರು ಲಭ್ಯವಿರುವ ಎತ್ತಿನಹೊಳೆಗಾಗಿ ರಾಜ್ಯ ಸರ್ಕಾರವು ಲಾಬಿ ಮಾಡುತ್ತಿದೆ. ಆದರೆ ಬಯಲು ಸೀಮೆಯ ಜಿಲ್ಲೆಗಳ ಧಣಿವಾರಿಸಲು ಪಶ್ವಿಮ ಘಟ್ಟಗಳಿಂದ 180 ಟಿಎಂಸಿ, ಕೃಷ್ಣಾ ನದಿಯಿಂದ 60 ಟಿಎಂಸಿ ಒಟ್ಟು 240 ಟಿಎಂಸಿ  ನೀರು ಅಗತ್ಯವಿದೆ. ಆದರೆ ಕೇವಲ 7 ಟಿಎಂಸಿ ನೀರು ನೀಡುವ ಯೋಜನೆ ಜಾರಿಗಾಗಿ ಯತ್ನಿಸುತ್ತಿರುವುದು ಏಕೆ ? ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು. .
ಬಯಲು ಸೀಮೆ ಜಿಲ್ಲೆಗಳ ಜನರು ನೀರಿನ ಅಭಾವದಿಂದ ರೈತ, ಕೃಷಿ ಕೂಲಿ­ಕಾರ್ಮಿಕರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಯುವಕರು ನಿಶಕ್ತರಾಗು­ತ್ತಿದ್ದಾರೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರಿಲ್ಲದೆ ಜಿಲ್ಲೆಯು ಕೆಲವೇ ವರ್ಷಗಳಲ್ಲಿ ಮರುಭೂಮಿ­ಯಾಗಲಿದೆ. ಆದರೆ ರಾಜ್ಯ ಸರ್ಕಾರವು ಕೇಂದ್ರದ ದಾಸರಾಗಿದ್ದಾರೆ ಎಂದು ಟೀಕಿಸಿದರು.

ಈಗ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುವ ಕುರಿತು ಭರವಸೆ ನೀಡಲಾಗುತ್ತಿದೆ. ಆದರೆ ಇದು ಕೂಡ ಭರವಸೆಯಾಗಿಯೇ ಉಳಿದುಕೊಳ್ಳಲಿದೆ ಹೊರತು ಅನುಷ್ಠಾನಕ್ಕೆ ಬರುವುದು ಕಷ್ಟ. ಎತ್ತಿನಹೊಳೆ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿರುವ ಹಿಂದೆ ರಾಜಕೀಯ ಕೈವಾಡವಿದೆ. ನೀರಾವರಿ ಬಗ್ಗೆ ಜನರಲ್ಲಿ ಭ್ರಮೆ ಮೂಡಿಸ­ಲಾಗುತ್ತಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ,  ರಾಜ್ಯದ ಮೂರನೇ ಭಾಗ­ದಷ್ಟು ಜನರ ಅಳಿವು ಉಳಿವು ಶಾಶ್ವತ ನೀರಿವಾರಿ ಯೋಜನೆಯಲ್ಲಿ ಅಡಗಿದೆ. ಚಳವಳಿಯನ್ನು ತೀವ್ರಗೊಳಿಸಲು ಪ್ರತಿ­ಯೊಬ್ಬರೂ ಕೈಜೋಡಿಸಬೇಕು. ರೈತರು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆ­ಗಳು, ಬುದ್ದಿಜೀವಿಗಳು ಜನಾಂದೋಲನ ಮಾಡಬೇಕು ಎಂದರು.

ಪದಾಧಿಕಾರಿಗಳ ನೇಮಕ: ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಗೌರವಾಧ್ಯಕ್ಷ ವೆಂಕಟೇಗೌಡ, ಅಧ್ಯಕ್ಷ ಅಶ್ವತ್ಥರೆಡ್ಡಿ, ಕಾರ್ಯದರ್ಶಿ ಲಕ್ಷ್ಮೀ­ನಾರಾ­ಯಣ, ಮುಖಂಡರಾದ ಮುನಿರೆಡ್ಡಿ, ಹನುಮಂತರೆಡ್ಡಿ, ಅಶ್ವತ್ಥಪ್ಪ, ನಂಜಿರೆಡ್ಡಿ, ಅಶೋಕ್, ಪವಿತ್ರಮ್ಮ, ಭಾಗ್ಯಮ್ಮ, ಜಯರಾಮರೆಡ್ಡಿ, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.