ADVERTISEMENT

‘ಜನರ ಹಕ್ಕು ಕಸಿದುಕೊಳ್ಳುತ್ತಿರುವ ಪಕ್ಷಗಳು’

ಎಡಪಕ್ಷಗಳ ಜಾಥಾಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 6:19 IST
Last Updated 28 ಸೆಪ್ಟೆಂಬರ್ 2013, 6:19 IST
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ಎಡಪಕ್ಷಗಳ ಪರ್ಯಾಯ ಧೋರಣೆಗಳ ಪ್ರಚಾರಾಂದೋಲನ ಜಾಥಾಗೆ ಚಾಲನೆ ನೀಡಿದರು. ಸಿಪಿಎಂ ಮುಖಂಡರಾದ ಬಿ.ಎನ್‌.ಮುನಿಕೃಷ್ಣಪ್ಪ, ಚನ್ನರಾಯಪ್ಪ, ರಘುರಾಮರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ, ರವಿಚಂದ್ರರೆಡ್ಡಿ ಮತ್ತಿತರರು ಇದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ಎಡಪಕ್ಷಗಳ ಪರ್ಯಾಯ ಧೋರಣೆಗಳ ಪ್ರಚಾರಾಂದೋಲನ ಜಾಥಾಗೆ ಚಾಲನೆ ನೀಡಿದರು. ಸಿಪಿಎಂ ಮುಖಂಡರಾದ ಬಿ.ಎನ್‌.ಮುನಿಕೃಷ್ಣಪ್ಪ, ಚನ್ನರಾಯಪ್ಪ, ರಘುರಾಮರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ, ರವಿಚಂದ್ರರೆಡ್ಡಿ ಮತ್ತಿತರರು ಇದ್ದಾರೆ.   

>ಚಿಕ್ಕಬಳ್ಳಾಪುರ:  ದೇಶದ 120 ಕೋಟಿ ಜನರು ನಿರ್ಧರಿಸಬೇಕಾದ ಪ್ರಧಾನಿ ಅಭ್ಯರ್ಥಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನವರು ಆಯ್ಕೆ ಮಾಡುವುದು ನಿಜಕ್ಕೂ ವಿಷಾದನೀಯ. ತಮ್ಮ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂದು ಘೋಷಿ­ಸುವ ಮೂಲಕ ಎರಡೂ ಪಕ್ಷದವರೂ ತಮ್ಮ ಆಯ್ಕೆಯನ್ನು 120 ಕೋಟಿ ಜನರ ಮೇಲೆ ಹೇರುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯ­ದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಕಟುವಾಗಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಏರ್ಪಡಿಸ­ಲಾಗಿದ್ದ ಎಡಪಕ್ಷಗಳ ಪರ್ಯಾಯ ಧೋರಣೆಗಳ ಪ್ರಚಾರಾಂದೋಲನ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ನ ರಾಹಲ್‌ ಗಾಂಧಿ ಇಬ್ಬರೂ ಪ್ರಧಾನಿಯಾಗಲು ಯೋಗ್ಯರಲ್ಲ.

ಆದರೆ ಮೂರನೇ ಶಕ್ತಿ ಅಥವಾ ಅಭ್ಯರ್ಥಿ ಬೆಳಕಿಗೆ ಬಾರದಂತೆ ನಿಯಂತ್ರಿಸುತ್ತಿರುವ ಈ ಎರಡೂ ಪಕ್ಷಗಳು ದೇಶದ ಜನರ ಮೇಲೆ ಒತ್ತಡ ಹೇರುತ್ತಿವೆ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತಹ ಪರಿಸ್ಥಿತಿ ನಿರ್ಮಿಸುತ್ತಿವೆ’ ಎಂದರು.

ನಮ್ಮ ದೇಶದ ಪ್ರಜಾಪ್ರಭುತ್ವ ವಿಶ್ವದಲ್ಲೇ ವಿಭಿನ್ನತೆಯಿಂದ ಕೂಡಿದ್ದು, ಎಲ್ಲರಿಗೂ ಚುನಾವಣೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಎಡಪಕ್ಷಗಳು, ಪ್ರಾದೇಶಿಕ ಮತ್ತು ಪ್ರಾದೇಶಿಕ ಪಕ್ಷಗಳು ಅಥವಾ ಪಕ್ಷೇತರ ಅಭ್ಯರ್ಥಿಗಳು ಚುನಾ­ವಣೆಯಲ್ಲಿ ಸೆಣೆಸಬಹುದು.

ಆದರೆ ಅಮೆರಿಕದ ಬಂಡವಾಳಶಾಹಿಗಳ ಇಚ್ಛೆ­ಯಂತೆ ಇಲ್ಲಿಯೂ ಕೂಡ ಅಮೆರಿಕದ ಅಧ್ಯಕ್ಷ ಮಾದರಿಯ ಚುನಾ­ವಣೆ ನಡೆ­ಸಲು ಪ್ರಯತ್ನಿಸ­ಲಾಗುತ್ತಿದೆ. ಜನರ ಆಯ್ಕೆ ಮತ್ತು ಹಕ್ಕನ್ನು ಕಸಿದು­ಕೊಳ್ಳ­ಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಬಹು­ತೇಕ ಪಕ್ಷಗಳು ಸ್ವಾರ್ಥ ರಾಜಕಾರಣದಲ್ಲಿ ತೊಡಗಿಕೊಂಡಿವೆ, ಉದ್ಯಮಿ ಮುಖೇಶ್‌ ಅಂಬಾನಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್‌ ಮನೆ ನಿರ್ಮಿಸಿದ್ದನ್ನೇ ದೊಡ್ಡದಾಗಿ ಬಿಂಬಿಸಿ ದೇಶವು ಅಭಿವೃದ್ಧಿಪಥದಲ್ಲಿ ಮುನ್ನಡೆದಿ­ದೆ­ಯೆಂದು ಹೇಳುತ್ತಾರೆ. ಇದು ಸ್ವಾರ್ಥವಲ್ಲದೇ ಮತ್ತೇನೂ ಅಲ್ಲ ಎಂದು  ಹೇಳಿದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳ ಕೃಷಿ ಮತ್ತು ಆರ್ಥಿಕ ನೀತಿ­ಯಿಂದಾಗಿ ಜನಸಾಮಾನ್ಯರು ತತ್ತರಿಸಿ­ದ್ದಾರೆ. ಕೃಷಿ ಚಟುವಟಿಕೆಯಿಂದ ಒಂದೆಡೆ ರೈತರು ದೂರವಾಗುತ್ತಿದ್ದರೆ, ಮತ್ತೊಂದೆಡೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಜನ­ಸಾಮಾನ್ಯರ ಬಗ್ಗೆ ಕಾಳಜಿ ತೋರದ ಇಂತಹ ಸರ್ಕಾರಗಳ ವಿರುದ್ಧ ಎಡಪಕ್ಷ­ಗಳು ಜೊತೆಗೂಡಿ ಪರ್ಯಾಯ ಧೋರಣೆ­ಗಳ ಪ್ರಚಾರಾಂದೋಲನ ಜಾಥಾಗೆ ಚಾಲನೆ ನೀಡಿವೆ. ಜಿಲ್ಲೆಯಾ­ದ್ಯಂತ 9 ಜಾಥಾಗಳು ಸುತ್ತಾಡಿ, ಬೆಂಗಳೂರಿನಲ್ಲಿ ಅಕ್ಟೋಬರ್‌ 8ಕ್ಕೆ ನಡೆಯುವ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ಸಿಪಿಎಂ ಮುಖಂಡರಾದ ಎಂ.ಪಿ.­ಮುನಿವೆಂಕಟಪ್ಪ, ಸಿ.ಗೋಪಿನಾಥ್, ಚನ್ನ­ರಾಯಪ್ಪ, ಬಿ.ಎನ್‌.ಮುನಿಕೃಷ್ಣಪ್ಪ, ರಘು­ರಾಮರೆಡ್ಡಿ, ಮಹಮ್ಮದ್‌ ಅಕ್ರಂ, ಜಯರಾಮರೆಡ್ಡಿ, ನಾಗರಾಜ್‌, ಮಂಜು­ನಾಥರೆಡ್ಡಿ, ರವಿಚಂದ್ರರೆಡ್ಡಿ, ಗೋವರ್ಧನಾಚಾರಿ, ಮಧುಲತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.