ADVERTISEMENT

‘ನೀರಿಗಾಗಿ ಭೋಗನಂದೀಶ್ವರನ ಮೇಲೆ ಪ್ರಮಾಣ ಮಾಡಿ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:49 IST
Last Updated 21 ಮಾರ್ಚ್ 2014, 6:49 IST

ಚಿಕ್ಕಬಳ್ಳಾಪುರ: ‘ಬಯಲು­ಸೀಮೆ ಪ್ರದೇಶ­ಗಳಿಗೆ 2 ವರ್ಷದೊಳಗೆ ಎತ್ತಿನ­ಹೊಳೆಯಿಂದ 24 ಟಿಎಂಸಿ ನೀರು ತರುತ್ತೇನೆ ಎಂದು ವೀರಪ್ಪ ಮೊಯಿಲಿ ಭೋಗ­ನಂದೀಶ್ವರ ದೇವರ ಮೇಲೆ ಪ್ರಮಾಣ ಮಾಡುವರೇ’ ಎಂದು ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಗರದ ಹೊರವಲಯದಲ್ಲಿ ಗುರು­ವಾರ ಜೆಡಿಎಸ್‌ ಕಾರ್ಯಕರ್ತರ ಸಮಾ­ವೇಶದ ಭಾಷಣ ಆರಂಭದಲ್ಲಿಯೇ ನಾನು ಯಾರನ್ನೂ ಟೀಕಿಸಿ ಸಮಯ ವ್ಯರ್ಥ ಮಾಡುವುದಿಲ್ಲ ಎನ್ನುತ್ತಾ ಮೊಯಿಲಿ, ಮಾಜಿ ಸಚಿವ ಬಿ.ಎನ್‌.­ಬಚ್ಚೇಗೌಡ ಮತ್ತು ಮಾಜಿ ಮುಖ್ಯ­ಮಂತ್ರಿ ಡಿ.ವಿ.ಸದಾನಂದಗೌಡ ವಿರುದ್ಧ ಟೀಕೆ, ಆರೋಪಗಳ ಸುರಿಮಳೆಗೈದರು.  ಮಾಜಿ ಮುಖ್ಯಮಂತ್ರಿ, ಸಚಿವರು ಕೇವಲ ಭರವಸೆಗಳನ್ನು ನೀಡಿದರೆ ಹೊರತು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

5  ವರ್ಷ ಆಳ್ವಿಕೆ ನಡೆಸಿದ ಬಿಜೆಪಿ ಸರ್ಕಾರವು ಎತ್ತಿನಹೊಳೆಯಿಂದ ಎಂಟು ಟಿಎಂಸಿ ನೀರು ಬರುವುದಾಗಿ ಹೇಳು­ತ್ತಿದ್ದರೆ, ವೀರಪ್ಪ ಮೊಯಿಲಿ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಹೇಳುತ್ತಿ­ದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ನೀರೇ ಇಲ್ಲದಿರುವಾಗ ಯೋಜನೆ ಅನುಷ್ಠಾನ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ನಾನು 20 ತಿಂಗಳ ಕಾಲ ಮುಖ್ಯಮಂತ್ರಿ­ಯಾಗಿದ್ದ ಅವಧಿಯಲ್ಲಿ 4,300 ಕೋಟಿ ರೂಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದೆ. ಆದರೆ ಬಿಜೆಪಿ ಸರ್ಕಾರವು ಯೋಜನೆಗೆ 700 ಕೋಟಿ ರೂಪಾಯಿ ಮೀಸಲಿಟ್ಟಿತೇ ಹೊರತು ಮತ್ತೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೋಲಾರದ ಯರಗೋಳ ನೀರಾವರಿ ಯೋಜನೆಯೂ ಪ್ರಗತಿ ಕಾಣಲಿಲ್ಲ.­ಇಂಥ ಸ್ಥಿತಿಯಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನ ಹೇಗೆ ಸಾಧ್ಯ ಎಂದು ಕೇಳಿದರು.

ಎಚ್‌.ಡಿ.ದೇವೇಗೌಡ ಅವರು ಪ್ರಧಾ­ನಿ­ಯಾಗಿದ್ದ ಕಾಲಘಟ್ಟದಲ್ಲಿ ಕೈಗೊಂಡ ಕೆಲಸಗಳನ್ನು ಜನರು ನೆನಪಿಸಿ­ಕೊಳ್ಳು­ತ್ತಾರೆ. ಕಾಂಗ್ರೆಸ್‌ ಮುಖಂಡರು ಸೋನಿಯಾ­ಗಾಂಧಿ, ರಾಹುಲ್ ಗಾಂಧಿ ಅವರನ್ನು ತೋರಿಸಿ ಮತಯಾಚಿಸಿದರೆ, ಬಿಜೆಪಿ ನರೇಂದ್ರ ಮೋದಿ ತೋರಿಸಿ ಮತಯಾಚನೆ ಮಾಡುತ್ತಾರೆ. ನಮ್ಮ ಪಕ್ಷ ಮಾತ್ರ ರಾಜ್ಯದ ಅಭಿವೃದ್ಧಿ ಮಾಡಿ­ದ್ದನ್ನು ತೋರಿಸಿ ಮತಯಾಚಿಸುತ್ತದೆ ಎಂದು ಅವರು ಹೇಳಿದರು.

ಶಾಸಕರಾದ ಎಂ.ಕೃಷ್ಣಾರೆಡ್ಡಿ, ಎಂ.ರಾಜಣ್ಣ, ಮಂಜುನಾಥ್, ಪಿಳ್ಳ­ಮುನಿ­ಶಾಮಪ್ಪ, ಡಾ. ಶ್ರೀನಿವಾಸ­ಮೂರ್ತಿ, ಜಮೀರ್‌ ಅಹಮದ್‌ ಖಾನ್‌, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಜ್ಯೋತಿರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್‌, ಡಾ. ಮಧುಸೀತಪ್ಪ, ಮುನೇಗೌಡ, ಶೀಲಾ ನಾಯಕ್‌ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಹುಕಾಲದ ಭಯ !
ಚಿಕ್ಕಬಳ್ಳಾಪುರ
:  ಸ್ವಾಗತ ಭಾಷಣ ಮಾಡುವ ಮುನ್ನವೇ ಮಧ್ಯಾಹ್ನ 1.20ರ ಸುಮಾರಿಗೆ ಸಮಾವೇಶ ಉದ್ಘಾಟಿಸ­ಲಾಯಿತು. ಅದಕ್ಕೆ ಕಾರಣ­ವನ್ನು ಸಹ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.­ನಾಗರಾಜ್‌ ನೀಡಿದರು. ‘ಮಧ್ಯಾಹ್ನ 1.30ಕ್ಕೆ ರಾಹುಕಾಲ ಶುರು­ವಾಗು­ವುದರಿಂದ ಅದಕ್ಕಿಂತ ಮೊದಲೇ ಕಾರ್ಯ­ಕ್ರಮ ಉದ್ಘಾಟಿಸಿದ್ದೇವೆ. ಇನ್ಮೇಲೆ ಸ್ವಾಗತ ಭಾಷಣ ಮಾಡು­ತ್ತೇವೆ’ ಎಂದು ಅವರು ತಿಳಿಸಿದರು.

ಎಚ್‌ಡಿಕೆ ಅವರೇ ಅಭ್ಯರ್ಥಿ !
ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರು ಭಾಷಣವನ್ನು ಕುಮಾರಸ್ವಾಮಿ ಅವರಿಗಾಗಿಯೇ ಮೀಸಲಿಟ್ಟರು. ಭಾಷಣದ ಆರಂಭ­ದಿಂದ ಕೊನೆಯವರೆಗೂ, ‘ಕುಮಾರ­ಸ್ವಾಮಿ ಅವರೇ ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಬೇಕು. ಕ್ಷೇತ್ರದಲ್ಲಿ ಒಂದೇ ದಿನ ಪ್ರಚಾರ ಮಾಡಿದರೂ ಅವರನ್ನು ನಾವು ಗೆಲ್ಲಿಸುತ್ತೇವೆ‘ ಎನ್ನುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.