ADVERTISEMENT

ಚಿಕ್ಕಬಳ್ಳಾಪುರ | ₹13 ಕೋಟಿ ಆರ್ಥಿಕ ನೆರವು ಜಮೆ

ರಾಜ್ಯ ಸರ್ಕಾರದಿಂದ ಮುಸುಕಿನ ಜೋಳ ಬೆಳೆಗಾರರಿಗೆ ₹5,000 ಘೋಷಣೆ, 26,159 ರೈತರ ಖಾತೆ ಹಣ ಜಮೆ

ಈರಪ್ಪ ಹಳಕಟ್ಟಿ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ ಮುಸುಕಿನ ಜೋಳ ಬೆಳೆದ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ₹5,000 ಆರ್ಥಿಕ ನೆರವು ಈವರೆಗೆ ಜಿಲ್ಲೆಯಲ್ಲಿ 26,159 ರೈತರಿಗೆ ದೊರೆತಿದೆ.

ಕಳೆದ ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆದ ರೈತರು ಕೋವಿಡ್‌ ಉಲ್ಭಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದ ಸೂಕ್ತ ಮಾರುಕಟ್ಟೆ ಸಿಗದೆ ನಲುಗುತ್ತಿದ್ದ ವೇಳೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಅಡಿ ಮುಸುಕಿನ ಜೋಳ ಬೆಳೆದ ರೈತರಿಗೆ ಆರ್ಥಿಕ ನೆರವು ಘೋಷಿಸಿತ್ತು.

2019-20ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವ ಬೆಳೆ ವಿವರಗಳ ಆಧರಿಸಿ ಮುಸುಕಿನ ಜೋಳ ಬೆಳೆದ ರೈತರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ₹13.07 ಕೋಟಿ ಆರ್ಥಿಕ ನೆರವು ರೈತರ ಖಾತೆಗಳಿಗೆ ಜಮೆಯಾಗಿದೆ.

ADVERTISEMENT

ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಮುಸುಕಿನ ಜೋಳ ಬೆಳೆದ ರೈತರ ಪೈಕಿ 28,241 ರೈತರಿಗೆಡಿಬಿಟಿ ಮೂಲಕ ಆರ್ಥಿಕ ನೆರವು ವರ್ಗಾವಣೆಗೆ ಕ್ರಮಕೈಗೊಂಡಿದೆ. ಅದರಲ್ಲಿ ಈವರೆಗೆ 26,159 ರೈತರಿಗೆ ನೆರವು ಸಂದಾಯವಾಗಿದ್ದು 2,082 ರೈತರಿಗೆ ನೆರವು ದೊರೆಯಬೇಕಿದೆ.

ಇಷ್ಟೇ ಅಲ್ಲದೆ ‘ನಿರಾಪೇಕ್ಷಣಾ ಪತ್ರ ಸಲ್ಲಿಸದ ಜಂಟಿ ಖಾತೆ ಹೊಂದಿದ ಫಲಾನುಭವಿಗಳು ಮತ್ತು ಫ್ರೂಟ್‌ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳದ ಸುಮಾರು 15 ರಿಂದ 20 ಸಾವಿರ ರೈತರಿಗೆ ಮುಸುಕಿನ ಜೋಳದ ಆರ್ಥಿಕ ನೆರವು ದೊರೆಯಬೇಕಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ.

‘ಜಂಟಿ ಖಾತೆ ಹೊಂದಿದವರ ಪೈಕಿ ಒಬ್ಬರಿಗೆ ಮಾತ್ರ ನೆರವು ನೀಡಲಾಗುತ್ತದೆ. ಅದಕ್ಕಾಗಿ ಅಂತಹ ರೈತರು ಉಳಿದ ಖಾತೆದಾರರಿಂದ ಒಪ್ಪಿಗೆ ಪತ್ರವನ್ನು ನೋಟರಿಯಿಂದ ದೃಢೀಕರಿಸಿ ಸಲ್ಲಿಸಬೇಕು. ಜಂಟಿ ಖಾತೆ ಮತ್ತು ಫ್ರೂಟ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳದ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನಾಮಫಲಕಗಳಲ್ಲಿ ಪ್ರದರ್ಶಿಸಲಾಗಿದೆ’ ಎಂದು ಹೇಳಿದರು.

‘ಪೌತಿ ಪ್ರಕರಣಗಳಲ್ಲಿ ತಮ್ಮ ಹೆಸರಿನಲ್ಲಿ ಜಮೀನು ಇಲ್ಲದೇ ತಮ್ಮ ಪೂರ್ವಜರ ಹೆಸರಿನಲ್ಲಿ ಜಮೀನು ಇರುವ ರೈತರು ಗ್ರಾಮ ಲೆಕ್ಕಧಿಕಾರಿಗಳಿಂದ ವಂಶವೃಕ್ಷ ಪಡೆದು ಇತರೆ ಕುಟುಂಬ ಸದಸ್ಯರಿಂದ ನಿರಾಕ್ಷೇಪಣಾ ಪತ್ರದೊಂದಿಗೆ ತಮ್ಮ ಆಧಾರ್ ಪ್ರತಿ, ಬ್ಯಾಂಕ್ ಖಾತೆ , ಪಹಣಿ, ಮೊಬೈಲ್ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸ ಸಲ್ಲಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.