ADVERTISEMENT

ವಲಸಿಗರು ಖುಷ್, ಸ್ವಪಕ್ಷೀಯರು ಬುಸ್!

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ₹700 ಕೋಟಿ ಅನುದಾನದ ಕಾಮಗಾರಿಗಳು ಮಂಜೂರು, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರಿಗೆ ನಿಗಮ–ಮಂಡಳಿಗಳಲ್ಲಿ ಮಣೆ

ಈರಪ್ಪ ಹಳಕಟ್ಟಿ
Published 12 ನವೆಂಬರ್ 2019, 19:30 IST
Last Updated 12 ನವೆಂಬರ್ 2019, 19:30 IST
ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆಗೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅನರ್ಹ ಶಾಸಕ ಸುಧಾಕರ್ ಅವರ ಬೆಂಬಲಿಗರು ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ದರು.
ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆಗೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅನರ್ಹ ಶಾಸಕ ಸುಧಾಕರ್ ಅವರ ಬೆಂಬಲಿಗರು ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ದರು.   

ಚಿಕ್ಕಬಳ್ಳಾಪುರ: ಉಪ ಚುನಾವಣೆ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಬಳ್ಳಾಪುರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರದ 100 ದಿನಗಳ ಆಡಳಿತದಲ್ಲಿ ಸುಮಾರು ₹700 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡುವ ಜತೆಗೆ, ಸಾರ್ವಜನಿಕ ವೇದಿಕೆಯಲ್ಲಿ ಅನರ್ಹ ಶಾಸಕ ಸುಧಾಕರ್ ಅವರನ್ನು ಕೊಂಡಾಂಡಿ, ಅವರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದು ಈಗ ಕ್ಷೇತ್ರದಲ್ಲಿ ಚರ್ಚೆಗೆ ಎಡೆ ಮಾಡಿದೆ.

ಇತ್ತೀಚೆಗೆ ಯಡಿಯೂರಪ್ಪ ಅವರು ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ್ದು ಎನ್ನಲಾದ ಆಡಿಯೊ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ ಅವರು, ‘ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ಎಲ್ಲಿಗಾದರೂ ಹೋಗಲಿ. ಯಾವ ಪಕ್ಷವನ್ನಾದರೂ ಸೇರಿಕೊಳ್ಳಲಿ. ಬೇಕಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ’ ಎಂದಿದ್ದರು.

ಹಾಗೇ ಹೇಳಿದ ಮೂರೇ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದ ವೇದಿಕೆಯಲ್ಲಿ, ಯಡಿಯೂರಪ್ಪ ಅವರನ್ನು ಮೊದಲುಗೊಂಡು, ಇಬ್ಬರು ಉಪ ಮುಖ್ಯಮಂತ್ರಿಗಳು, ಒಬ್ಬ ಸಚಿವ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ‘ಉಪ ಚುನಾವಣೆಯಲ್ಲಿ ಸುಧಾಕರ್ ಅವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡುವ ಮೂಲಕ ಜನರಲ್ಲಿ ಸೋಜಿಗ ಮೂಡಿಸಿದರು.

ADVERTISEMENT

ಯಡಿಯೂರಪ್ಪ ಅವರಂತೂ, ‘ಒಬ್ಬ ಜನಪ್ರಿಯ ನಾಯಕ ಹೇಗಿರಬೇಕು ಎನ್ನುವುದನ್ನು ಸುಧಾಕರ್ ಅವರು ತೋರಿಸಿ ಕೊಟ್ಟಿದ್ದಾರೆ. ಅವರಿಗೆ ಯಾವ ರೀತಿ ಸಹಕಾರ ಮಾಡಬೇಕು ಎಂದು ನೀವು ಈಗಾಗಲೇ ನಿರ್ಧಾರ ಮಾಡಿದ್ದಿರಿ. ಆ ನಿರ್ಧಾರ ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ’ ಎಂದು ನೆರೆದ ಬೃಹತ್ ಜನಸ್ತೋಮಕ್ಕೆ ಹೇಳುವ ಮೂಲಕ ‘ಅನರ್ಹರಿಗೂ ತಮಗೂ ಸಂಬಂಧವಿದೆ’ ಎಂಬ ಸಂದೇಶವನ್ನು ಬಹಿರಂಗವಾಗಿಯೇ ರವಾನಿಸಿ, ಗಮನ ಸೆಳೆದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಸುಧಾಕರ್ ಅವರು ಕ್ಷೇತ್ರದಲ್ಲಿ ಎತ್ತಿನಹೊಳೆ, ಎಚ್‌.ಎನ್.ವ್ಯಾಲಿ ಯೋಜನೆಗಳು ಸೇರಿದಂತೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕ್ಷೇತ್ರಕ್ಕೆ ಹರಿದು ಬಂದ ಅನುದಾನ, ಮಾಡಿರುವ ಸಾಧನೆಗಳ ಕುರಿತು ಪ್ರತಿಸಭೆಯಲ್ಲಿ ಗಿಳಿಪಾಠ ಒಪ್ಪಿಸುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ವೈದ್ಯಕೀಯ ಕಾಲೇಜು, ನೂತನ ಮಂಚೇನಹಳ್ಳಿ ತಾಲ್ಲೂಕು, ವಸತಿ ರಹಿತರಿಗೆ ನಿವೇಶನಗಳು ಎಂಬ ಜಪದೊಂದಿಗೆ ಯಡಿಯೂರಪ್ಪ ಅವರ ಸಾಧನೆಗಳ ಗುಣಗಾನ ಆರಂಭಿಸಿದ್ದಾರೆ.

ಸುಧಾಕರ್ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ‘ಪ್ರಭಾವ’ ಬಳಸಿ, ಮೂರು ಬೆಂಬಲಿಗರನ್ನು ವಿವಿಧ ನಿಗಮ, ಮಂಡಳಿಗಳಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿಸಿದ್ದಾರೆ. ಇದು ತಮ್ಮದೇ ಸರ್ಕಾರದಲ್ಲಿ ಪಕ್ಷದ ವರಿಷ್ಠರಿಂದ ಕಡೆಗಣನೆಗೆ ಒಳಗಾದ ಸ್ಥಳೀಯ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.

‘ಯಡಿಯೂರಪ್ಪ ಅವರು ತಮ್ಮ ಕುರ್ಚಿ ಉಳಿವಿಗಾಗಿ ಅನರ್ಹರನ್ನು ಓಲೈಸುವುದು ಮಾತ್ರವಲ್ಲದೆ, ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಅನರ್ಹ ಶಾಸಕರ ಬೆಂಬಲಿಗರು, ಪಕ್ಷದ ಸಿದ್ಧಾಂತ ಗೊತ್ತಿಲ್ಲದವರು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಕೂಡ ಪಡೆಯದವರಿಗೂ ನಿಗಮ, ಮಂಡಳಿಗಳಲ್ಲಿ ಮಣೆ ಹಾಕುತ್ತಿದ್ದಾರೆ’ ಎಂದು ಬಿಜೆಪಿಯ ಸ್ಥಳೀಯ ಮುಖಂಡರು ಆರ್‌ಎಸ್‌ಎಸ್‌ ಮುಖಂಡರ ಮುಂದೆ ಅವಲತ್ತುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.