ADVERTISEMENT

ಚಿಕ್ಕಬಳ್ಳಾಪುರ: 115 ಗ್ರಾಮಕ್ಕೆ ವ್ಯಾಪಿಸಿದ ಚರ್ಮಗಂಟು

ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರಿನಲ್ಲಿ ಮೊದಲ ಸಾವಿನ ಪ್ರಕರಣ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಅಕ್ಟೋಬರ್ 2022, 7:09 IST
Last Updated 7 ಅಕ್ಟೋಬರ್ 2022, 7:09 IST
   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರಿನಲ್ಲಿ ನಾಲ್ಕು ದಿನಗಳ ಹಿಂದೆ ಚರ್ಮಗಂಟು ರೋಗದಿಂದ ಹಸು ಮೃತಪಟ್ಟಿದೆ. ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರು ಬಲಿಯಾದ ಮೊದಲ ಪ್ರಕರಣ ಇದಾಗಿದೆ.

ನಾಲ್ಕೈದು ದಿನಗಳ ಕಾಲ ಈ ಹಸುವಿಗೆ ವೈದ್ಯರು ಚಿಕಿತ್ಸೆ ಸಹ ನೀಡಿದ್ದಾರೆ. ಆದರೆ ರೋಗ ಉಲ್ಬಣಿಸಿದ್ದರಿಂದ ರಾಸು ಮೃತಪಟ್ಟಿದೆ. ರೋಗ ಉಲ್ಬಣಿಸುತ್ತಿರುವುದು ಮತ್ತು ಸಾವು ಸಂಭವಿಸಿರುವುದು ಸಹಜವಾಗಿ ಹೈನುಗಾರರು ಮತ್ತು ರೈತರನ್ನು ಕಂಗಾಲುಗೊಳಿಸಿದೆ.

ಪಶುಸಂಗೋಪನಾ ಇಲಾಖೆಯ ವರದಿಯ ಪ್ರಕಾರ ಅ.10ರವರೆಗೆ ಜಿಲ್ಲೆಯ 115 ಗ್ರಾಮಗಳ ರಾಸುಗಳಿಗೆ ಚರ್ಮ ಗಂಟು ರೋಗ ವ್ಯಾಪಿಸಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎನ್ನುತ್ತವೆ ಇಲಾಖೆ ಮೂಲಗಳು.

ADVERTISEMENT

ಬಾಗೇಪಲ್ಲಿ ತಾಲ್ಲೂಕಿನ 13, ಚಿಕ್ಕಬಳ್ಳಾಪುರ ತಾಲ್ಲೂಕಿನ 46, ಚಿಂತಾಮಣಿ ತಾಲ್ಲೂಕಿನ 15, ಗೌರಿಬಿದನೂರು 9, ಗುಡಿಬಂಡೆ 5 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 27 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದೆ.

30 ಸಾವಿರ ಲಸಿಕೆ: ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹೆಚ್ಚಿದಂತೆ ಪಶುಸಂಗೋಪನಾ ಇಲಾಖೆಯು 30 ಸಾವಿರ ಲಸಿಕೆಗಳನ್ನು ಖರೀದಿಸಿ. ಜಿಲ್ಲೆಯ ಆರು ತಾಲ್ಲೂಕುಗಳಿಗೂ ತಲಾ ಐದು ಸಾವಿರ ಲಸಿಕೆಯನ್ನು ನೀಡಲು ಮೀಸಲಿರಿಸಲಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ 1,709, ಚಿಕ್ಕಬಳ್ಳಾಪುರ ತಾಲ್ಲೂಕಿನ 2,893, ಚಿಂತಾಮಣಿ ತಾಲ್ಲೂಕಿನ 2,500, ಗೌರಿಬಿದನೂರು 1,120, ಗುಡಿಬಂಡೆ 2,081 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 1,422 ಸೇರಿದಂತೆ ಒಟ್ಟು 11,815 ಜಾನುವಾರುಗಳಿಗೆ ಈಗಾಗಲೇ ಲಸಿಕೆಯನ್ನು ಹಾಕಲಾಗಿದೆ.

ಜಿಲ್ಲೆಯಲ್ಲಿ ಸೆ.20ರ ವೇಳೆಗೆ 50ಕ್ಕೂ ಹೆಚ್ಚು ರಾಸುಗಳಿಗೆ ಈ ರೋಗ ಹರಡಿತ್ತು. ಕೇವಲ20 ದಿನಗಳಲ್ಲಿ ತೀವ್ರವಾಗಿ ಜಾನುವಾರುಗಳಿಗೆ ಚರ್ಮ ಗಂಟಿನ ರೋಗ ವ್ಯಾಪಿಸುತ್ತಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ 125 ರಾಸುಗಳು ಸೋಂಕಿಗೆ ತುತ್ತಾಗಿವೆ.

ಜಾನುವಾರು ಸಂತೆಗೆ ನಿರ್ಬಂಧ
ಚರ್ಮಗಂಟು ರೋಗ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಸಂತೆಯಲ್ಲಿ ಹೇರಳ ಸಂಖ್ಯೆಯಲ್ಲಿ ರಾಸುಗಳು ಸೇರುತ್ತವೆ. ಇಲ್ಲಿ ಒಂದು ರಾಸಿಗೆ ರೋಗ ಹರಡಿದ್ದರೆ ಅದು ಮತ್ತಷ್ಟು ಉಲ್ಬಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಾತ್ಕಾಲಿಕವಾಗಿ ಜಾನುವಾರು ಸಂತೆಗಳು ನಡೆಯುವುದನ್ನು ನಿರ್ಬಂಧಿಸಿದೆ. ಸೊಳ್ಳೆಗಳು ಮತ್ತು ನೊಣದ ಕಾರಣದಿಂದ ಚರ್ಮಗಂಟು ರೋಗ ವ್ಯಾಪಿಸುತ್ತಿದ್ದು ಗ್ರಾಮಗಳಲ್ಲಿ ಫಾಗಿಂಗ್‌ಗೂ ಜಿಲ್ಲಾ ಪಂಚಾಯಿತಿ ಸೂಚಿಸಿದೆ.

ಸಮರೋಪಾದಿಯಲ್ಲಿ ಲಸಿಕೆ
ಚರ್ಮಗಂಟು ರೋಗಕ್ಕೆ ತುತ್ತಾಗಿರುವ ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕುವ ಕೆಲಸ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರವಿ ‍‘ಪ್ರಜಾವಾಣಿ’ಗೆ ತಿಳಿಸಿದರು.

ಚರ್ಮಗಂಟು ರೋಗದಿಂದ ಒಂದು ಹಸು ಮೃತಪಟ್ಟರೆ ಹಸುವಿನ ಮಾಲೀಕರಿಗೆ ಸರ್ಕಾರ ₹ 20 ಸಾವಿರ ಪರಿಹಾರ ಧನ ನೀಡುತ್ತದೆ. ಬೋದಗೂರಿನಲ್ಲಿ ಮೃತಪಟ್ಟ ರಾಸು ಜಾನುವಾರು ವಿಮೆಗೆ ಒಳಪಟ್ಟಿದೆ. ಪರಿಹಾರಕ್ಕಾಗಿ ವಿಮಾ ಕಂಪನಿಗೆ ಮಾಹಿತಿ ಸಹ ಸಲ್ಲಿಸಲಾಗಿದೆ ಎಂದು ಹೇಳಿದರು.

ನಮ್ಮ ರಾಜ್ಯಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ರಾಸುಗಳು ಹೆಚ್ಚು ಮೃತಪಡುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.