ADVERTISEMENT

1.26 ಲಕ್ಷ ವಿದ್ಯಾರ್ಥಿಗಳಿಗೆ ಹಾಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 9:52 IST
Last Updated 1 ಆಗಸ್ಟ್ 2013, 9:52 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಲಿದೆ.

ಸುಮಾರು 1.26 ಲಕ್ಷ ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ 19 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಹಾಲು ವಿತರಣೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್‌ಪ್ರಸಾದ್ ಅವರು ವಿವಿಧ ಶಾಲೆಗಳ ಮುಖ್ಯಶಿಕ್ಷಕರಿಗೆ ಮತ್ತು ಶಿಕ್ಷಕಿಯರಿಗೆ ಹಾಲಿನ ಪುಡಿಯ ಮೂಟೆಗಳನ್ನು ವಿತರಿಸಿದರು.

ವಾರದಲ್ಲಿ ಮೂರು ದಿನಗಳಾದ ಸೋಮವಾರ, ಬುಧವಾರ ಮತ್ತು ಶುಕ್ರವಾರ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಗುವುದು.
ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರದ ಬದಲು ಶನಿವಾರ ವಿತರಿಸಲಾಗುವುದು ಎಂದು  ಪ್ರಸಾದ್ ಹೇಳಿದರು.

ಮಕ್ಕಳಲ್ಲಿ ಕಾಡುತ್ತಿರುವ ಪೌಷ್ಟಿಕಾಂಶದ ಕೊರತೆ ನೀಗಿಸುವಲ್ಲಿ ಹಾಲು ವಿತರಣೆ ಪ್ರಮುಖ ಪಾತ್ರವಹಿಸಲಿದೆ. 

ಹಾಲು ವಿತರಣೆ ವೇಳೆ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಳ್ಳಲಾಗುವುದು. ಇದರ ಬಗ್ಗೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದರು.

ಸಮುದಾಯ ಸಂಪನ್ಮೂಲ ಶಿಕ್ಷಕರಾದ ನಜೀರ್, ಮಂಜುನಾಥ್, ಕೋಚಿಮುಲ್ ಸಹಾಯಕ ನಿರ್ದೇಶಕ ಚಂದ್ರಪ್ಪ ಮತ್ತು ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.