ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1.90 ಲಕ್ಷ ಅನಕ್ಷರಸ್ಥರು

ಪ್ರಸಕ್ತ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯ 16 ಸಾವಿರ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ

ಡಿ.ಎಂ.ಕುರ್ಕೆ ಪ್ರಶಾಂತ
Published 4 ಫೆಬ್ರುವರಿ 2024, 6:58 IST
Last Updated 4 ಫೆಬ್ರುವರಿ 2024, 6:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಓದು, ಬರಹ ಬಾರದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಸರ್ಕಾರವು ಹಲವು ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಇಂದಿಗೂ 1.90 ಲಕ್ಷ ಮಂದಿ ಅನಕ್ಷರಸ್ಥರು ಇದ್ದಾರೆ. 

ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ಅನಕ್ಷರಸ್ಥರು ಇದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 1,28,398 ಮಂದಿ ಹಾಗೂ ನಗರ ಪ್ರದೇಶದಲ್ಲಿ 62,367 ಮಂದಿ ಅನಕ್ಷರಸ್ಥರು ಇದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರಲ್ಲಿ ಹೆಚ್ಚು ಅನಕ್ಷರಸ್ಥರು ಇದ್ದರೆ ಗ್ರಾಮೀಣ ಭಾಗಗಳಲ್ಲಿ ಪುರುಷರು ಹೆಚ್ಚು ಅನಕ್ಷರಸ್ಥರು ಇದ್ದಾರೆ. 15 ವರ್ಷ ಮೇಲ್ಪಟ್ಟಿರುವ ಓದು ಮತ್ತು ಬರಹ ಬಾರದವನ್ನು ಅನಕ್ಷರಸ್ಥರು ಎಂದು ಸರ್ಕಾರವು ಗುರುತಿಸುತ್ತದೆ. ಇವರನ್ನು ಅಕ್ಷರಸ್ಥರನ್ನಾಗಿಸಲು ಶಿಕ್ಷಣ ಕೊಡಿಸಲಾಗುತ್ತದೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 1,83,202 ಪುರುಷರು ಮತ್ತು 2,38,086 ಮಹಿಳೆಯರು ಸೇರಿದಂತೆ 4,21,288 ಮಂದಿ ಅನಕ್ಷರಸ್ಥರು ಇದ್ದರು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 3,46,583 ಮತ್ತು ನಗರ ಪ್ರದೇಶದಲ್ಲಿ 74,705 ಅನಕ್ಷರಸ್ಥರು ಇದ್ದರು.

ADVERTISEMENT

2011ರ ಜನಗಣತಿ ಪ್ರಕಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ 81,560, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 74,552, ಚಿಂತಾಮಣಿಯಲ್ಲಿ 89,305, ಗೌರಿಬಿದನೂರು 69,791, ಗುಡಿಬಂಡೆಯಲ್ಲಿ 27,804 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 78,276 ಮಂದಿ ಅನಕ್ಷರಸ್ಥರು ಇದ್ದರು.

ಪ್ರತಿ ವರ್ಷವೂ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಇಂತಿಷ್ಟು ಮಂದಿಯನ್ನು ಸಾಕ್ಷರರನ್ನಾಗಿ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡುತ್ತದೆ. ಆ ಪ್ರಕಾರ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಇಳಿಕೆಯತ್ತ ಸಾಗಿದೆ. ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ 2022–23ನೇ ಸಾಲಿನ ವೇಳೆ ಅನಕ್ಷರಸ್ಥರನ್ನು 1.90 ಲಕ್ಷಕ್ಕೆ ಇಳಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. 1 ಸಾವಿರ ಗ್ರಾಮ ಪಂಚಾಯಿತಿಗಳನ್ನು ಅನಕ್ಷರಸ್ಥ ಮುಕ್ತ ಪಂಚಾಯಿತಿಗಳ ನ್ನಾಗಿ ಮಾಡಬೇಕು ಎಂದು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆ ಪ್ರಕಾರ ಕಳೆದ ವರ್ಷ 500 ಪಂಚಾಯಿತಿಗಳನ್ನು ರಾಜ್ಯದಾದ್ಯಂತ ಗುರುತಿಸಲಾಗಿದೆ. 

‘ನವ ಭಾರತ ಸಾಕ್ಷರರು’ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ದೇಶದಾದ್ಯಂತ ಜಾರಿಗೊಳಿಸಿದೆ. 2027ರ ಒಳಗಾಗಿ ಇಡೀ ದೇಶವನ್ನು ಅನಕ್ಷರ ಮುಕ್ತಗೊಳಿಸಬೇಕಾಗಿದೆ. ಇದಕ್ಕಾಗಿ ಸರ್ಕಾರಗಳು ನಾನಾ ಕಾರ್ಯಕ್ರಮಗಳನ್ನು ಸಹ ಜಾರಿಗೊಳಿಸಿವೆ.

ಕಳೆದ ವರ್ಷ ಜಿಲ್ಲೆಯಲ್ಲಿ 11,282 ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಬೇಕು ಎಂದು ಗುರಿ ನಿಗದಿಗೊಳಿಸಲಾಗಿತ್ತು. ಪ್ರಸಕ್ತ ವರ್ಷ 16 ಸಾವಿರ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸುವರು.

ಈ ಹಿಂದೆ ಲೋಕ ಶಿಕ್ಷಣ ನಿರ್ದೇಶನಾಲಯದ ಮೂಲಕ ಅನಕ್ಷರಸ್ಥರಿಗೆ ಕಲಿಸಲಾಗುತ್ತಿತ್ತು. ಈಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಜವಾಬ್ದಾರಿ ನೀಡಿದ್ದಾರೆ. ಶಿಕ್ಷಕರು ಮತ್ತು ಸ್ವಯಂ ಸೇವಕರು ಜವಾಬ್ದಾರಿಯಿಂದ ಈ ಕಾರ್ಯಕ್ರಮಗಳನ್ನು ನಡೆಯಬೇಕು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಯು ರಾಜ್ಯ ಮಟ್ಟದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಡಯಟ್, ತಾಲ್ಲೂಕು ಹಂತದಲ್ಲಿ ಬಿಆರ್‌ಸಿ, ಕ್ಲಸ್ಟರ್ ಹಂತದಲ್ಲಿ ಅಲ್ಲಿನ ಅಧಿಕಾರಿಗಳು, ಗ್ರಾಮ ಹಂತದಲ್ಲಿ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಜವಾಬ್ದಾರಿಯನ್ನು ಸರ್ಕಾರ ನೀಡಿದೆ ಎಂದು ಹೇಳಿದರು. 

ಚಿಂತಾಮಣಿಯಲ್ಲಿ ಗರಿಷ್ಠ
ಜಿಲ್ಲೆಯ ಪ್ರಮುಖ ತಾಲ್ಲೂಕು ಎನಿಸಿರುವ ಚಿಂತಾಮಣಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅನಕ್ಷರಸ್ಥರು ಇದ್ದಾರೆ. ಈ ತಾಲ್ಲೂಕಿನಲ್ಲಿ ಮಹಿಳೆ ಮತ್ತು ಪುರುಷರು ಸೇರಿ 41785 ಮಂದಿ ಅನಕ್ಷರಸ್ಥರು ಇದ್ದಾರೆ. ರಾಜಧಾನಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ 37180 ಮಂದಿ ಅನಕ್ಷರಸ್ಥರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.