ADVERTISEMENT

ಜೆಡಿಎಸ್‌ಗೆ 20, ಕಾಂಗ್ರೆಸ್‌ಗೆ 70 ಸ್ಥಾನ- ಆರ್. ಅಶೋಕ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಆರ್. ಅಶೋಕ ಲೇವಡಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 4:37 IST
Last Updated 16 ಮಾರ್ಚ್ 2023, 4:37 IST
ಆರ್. ಅಶೋಕ
ಆರ್. ಅಶೋಕ    

ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 20 ಸ್ಥಾನ ಮತ್ತು ಕಾಂಗ್ರೆಸ್ 70 ಸ್ಥಾನವನ್ನಷ್ಟೇ ಗೆಲ್ಲಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

ನಗರದಲ್ಲಿ ಬುಧವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಯಾವಾಗ ಒಂದಾಗುತ್ತಾರೊ, ಕಿತ್ತಾಡುತ್ತಾರೊ ಗೊತ್ತಾಗುವುದಿಲ್ಲ. 14 ತಿಂಗಳ ಕಾಲ ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ.ಕುಮಾರಸ್ವಾಮಿ ನಾವು ಜೋಡೆತ್ತು ಎಂದು ಕೈ ಎತ್ತಿದರು. ಆದರೆ ಈಗ ಕುಸ್ತಿ ಮಾಡುತ್ತಿದ್ದಾರೆ. 14 ತಿಂಗಳು ಜನರಿಗೆ ಟೋಪಿ ಹಾಕಿದರು ಎಂದರು.

ADVERTISEMENT

ಜೆಡಿಎಸ್‌ನವರು ಗೆಲ್ಲುವುದಿಲ್ಲ. ಅವರನ್ನು ನಂಬಿಕೊಂಡರೆ ಕಷ್ಟ. ಅವರು ಗೆಲ್ಲುವುದೇ 20 ಸ್ಥಾನ. ಶಿವಲಿಂಗೇಗೌಡರು, ಗುಬ್ಬಿ ಶ್ರೀನಿವಾಸ್ ಜೆಡಿಎಸ್ ತೊರೆಯುತ್ತಿದ್ದಾರೆ. ಎಲ್ಲರೂ ಆ ಪಕ್ಷದಿಂದ ಓಡು ಮಗಾ ಓಡು ಮಗಾ ಎನ್ನುತ್ತಿದ್ದಾರೆ ಎಂದು ಹೇಳಿದರು.

ನಂದಿಬೆಟ್ಟಕ್ಕೆ ರೋಪ್ ವೇಗೆ ₹100 ಕೋಟಿ ಕೊಟ್ಟಿದ್ದು ಬಿಜೆಪಿ, ಮಂಚೇನಹಳ್ಳಿಯನ್ನು ಹೊಸ ತಾಲ್ಲೂಕು ಮಾಡಲಾಗಿದೆ. ಈ ಕ್ಷೇತ್ರಕ್ಕೆ 24 ಸಾವಿರ ನಿವೇಶನಗಳನ್ನು ಕೊಟ್ಟಿದ್ದೇವೆ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ‘24 ಸಾವಿರ ನಿವೇಶಗಳಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರಿಗೆ ಹೆಚ್ಚಿನ ನಿವೇಶನ ನೀಡಿದ್ದೇವೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ರಾಮಲಿಂಗಪ್ಪ, ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಅ.ದೇವೇಗೌಡ, ಕೆ.ವಿ.ನಾಗರಾಜ್, ಕೃಷ್ಣಮೂರ್ತಿ, ನಾರಾಯಣಸ್ವಾಮಿ ಇದ್ದರು.

ಗಂಟೆಗಟ್ಟಲೇ ಟ್ರಾಫಿಕ್ ಜಾಮ್

ಎಂ.ಜಿ ರಸ್ತೆಯ ಜೈಭೀಮ್ ಹಾಸ್ಟೆಲ್‌ನಿಂದ ವಿಜಯಸಂಕಲ್ಪ ಯಾತ್ರೆ ಆರಂಭವಾಯಿತು. ಶಿಡ್ಲಘಟ್ಟ ವೃತ್ತದಲ್ಲಿ ನಾಯಕರು ಭಾಷಣ ಮಾಡಿದರು. ಶಿಡ್ಲಘಟ್ಟದಲ್ಲಿ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೇರಿದ್ದರಿಂದ ಸಂಚಾರ ಬಂದ್ ಆಯಿತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಪಟಾಕಿಯ ಅಬ್ಬರ, ಡಿಜೆ ನೃತ್ಯವೂ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.