ಚಿಂತಾಮಣಿ: ಸೈನಿಕರು ಗಡಿಯಲ್ಲಿ ದೇಶ ಸೇವೆ ಮಾಡುತ್ತಿದ್ದು, ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯ ಮಾಡಿದರೆ ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ಮೆಗಾ ಫ್ಯಾನ್ಸ್ ಅಸೋಸಿಯೇಷನ್ಸ್, ಲಯನ್ಸ್ ಕ್ಲಬ್ ಆಫ್ ಚಿಂತಾಮಣಿ ಮತ್ತು ಚಿಂತಾಮಣಿ ಲಯನ್ಸ್ ಸರ್ವೀಸ್ ಟ್ರಸ್ಟ್‌ನಿಂದ ಶನಿವಾರ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 400 ಯೂನಿಟ್ ರಕ್ತದ ಅವಶ್ಯಕತೆ ಇದೆ. ಕೊರೊನಾ ಹಿನ್ನೆಲೆಯಲ್ಲಿ 200 ಯೂನಿಟ್ ರಕ್ತ ಬ್ಲಡ್ ಬ್ಯಾಂಕಿನಲ್ಲಿ ದೊರೆಯುತ್ತಿದೆ. 200 ಯೂನಿಟ್ ರಕ್ತದ ಕೊರತೆ ಇರುತ್ತದೆ. ಶಿಬಿರದ ಮೂಲಕ 200 ಯೂನಿಟ್‌ಗಳಷ್ಟು ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಖಿಲ ಭಾರತ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಹೇಶ್ ಮಾತನಾಡಿ, ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು. ಚಿರಂಜೀವಿ ಪುತ್ರ ರಾಮ್‌ಚರಣ್ ಹುಟ್ಟುಹಬ್ಬದ ಅಂಗವಾಗಿ ದೇಶದೆಲ್ಲೆಡೆ ರಕ್ತದಾನ ಶಿಬಿರ ಮತ್ತು ಸಮಾಜ ಸೇವೆ ಕಾರ್ಯಕ್ರಮಗಳನ್ನು ಅಭಿಮಾನಿಗಳು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ನಮ್ಮಲ್ಲಿ ಸುಮಾರು 800 ರಕ್ತದಾನಿಗಳ ಪಟ್ಟಿ ಇದೆ. ಗರ್ಭಿಣಿಯರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ಇನ್ನಿತರೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಾಗ ದಾನಿಗಳು ಅರ್ಧರಾತ್ರಿಯಲ್ಲೂ ರಕ್ತ ನೀಡಿರುತ್ತಾರೆ ಎಂದು ನುಡಿದರು.
ಶಿಬಿರದಲ್ಲಿ 211 ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ರಾಮಚರಣ್ ಸಹಿವುಳ್ಳ ಅಭಿನಂದನಾ ಪ್ರಮಾಣ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. 10ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವವರನ್ನು ಸನ್ಮಾನಿಸಲಾಯಿತು.
ಡಿವೈಎಸ್‌ಪಿ ಲಕ್ಷ್ಮಯ್ಯ,, ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್, ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ಉಪನ್ಯಾಸಕ ಡಾ.ಎಂ.ಎನ್. ರಘು, ಶಿಕ್ಷಣ ಇಲಾಖೆಯ ಕೋಡಿರಂಗಪ್ಪ, ಸಿ.ವಿ. ನಾಗರಾಜ್, ಪಿ.ವಿ. ಸುನಿಲ್, ಕಾಗತಿ ಎಂ.ಎನ್. ನಾಗರಾಜ್, ಅಮರೇಶ್, ಆಟೊ ಮಧು, ರಮೇಶ್, ನರೇಶ್ ಬಾಬು, ಬೂಸರಾಜೇಶ್, ಶರತ್, ಶಿವಕುಮಾರ್, ಶಾಬೂದೀನ್, ರೆಡ್ಡಿ, ತೇಜ್, ವೆಂಕಟರಮಣಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.