ADVERTISEMENT

ಆಶ್ರಯ ಯೋಜನೆಯಡಿ 33 ಎಕರೆ ಮಂಜೂರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:04 IST
Last Updated 27 ಫೆಬ್ರುವರಿ 2021, 3:04 IST
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.   

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತಾಲೂಕಿನ ಮಂಡಿಕಲ್ಲು ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ಹೋಬಳಿ ಮಟ್ಟದ ಅದಾಲತ್‍ನ ಸಮಾರೋಪದಲ್ಲಿ ಒಟ್ಟು 31,365 ಮಂದಿ ಫಲಾನುಭವಿಗಳಿಗೆ ಒಟ್ಟಾರೆ ₹9.16 ಕೋಟಿ ವೆಚ್ಚದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆ ಮಾಡಲಾಯಿತು.

ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳಿಗೆ ಸಂಬಂಧಿಸಿದಂತೆ 477 ಅರ್ಜಿಗಳನ್ನು ಅದಾಲತ್ ಮೂಲಕ ಸ್ವೀಕರಿಸಿದ್ದು, ಮಂಜೂರಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಪವತಿ ವಾರಸು ಖಾತೆ 225 ಅರ್ಜಿಗಳು ಸ್ವೀಕೃತವಾಗಿದ್ದು, 156 ಫಲಾನುಭವಿಗಳಿಗೆ ಖಾತಾ ಪಹಣಿ ವಿತರಿಸಲಾಗಿದೆ. ಪಹಣಿ ತಿದ್ದುಪಡಿ ಸಂಬಂಧಿಸಿದಂತೆ 17 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಒತ್ತುವರಿ ತೆರವು ಬಗ್ಗೆ 16 ಅರ್ಜಿಗಳು ಸ್ವೀಕೃತವಾಗಿದ್ದು, ಭೂಮಾಪಕರೊಂದಿಗೆ ಅಳತೆ ಕಾರ್ಯ ಮಾಡಿಸಿ, ಒತ್ತುವರಿ ತೆರವುಗೊಳಿಸಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು, 33 ಎಕರೆ 13 ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

800 ರೈತರಿಗೆ ಮಣ್ಣು ಆರೋಗ್ಯ ಚೀಟಿ: ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 502 ರೈತರಿಗೆ ಉಚಿತ ಬೀಜ, ಗೊಬ್ಬರ, ಔಷಧಿಗಳನ್ನು ನೀಡಿ ₹16.05 ಲಕ್ಷ ಸಹಾಯಧನ ವಿನಿಯೋಗಿಸಲಾಗಿದೆ. ಮಣ್ಣು
ಆರೋಗ್ಯ ಅಭಿಯಾನದಡಿ 800 ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ, ₹78 ಲಕ್ಷ ವೆಚ್ಚ ಭರಿಸಲಾಗಿದೆ.

ADVERTISEMENT

ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಮಾರಾಟಕ್ಕೆ ದ್ವಿ-ಚಕ್ರ ವಾಹನ ಖರೀದಿಗೆ 4 ಫಲಾನುಭವಿಗಳಿಗೆ ಒಟ್ಟು 40 ಸಾವಿರ ಖಾತೆಗೆ ಜಮೆ ಮಾಡಲಾಗಿದೆ. ಎಸ್‍ಸಿಪಿ/ ಟಿಎಸ್‍ಪಿ 6 ಮಹಿಳಾ ಫಲಾನುಭವಿಗಳಿಗೆ ₹10 ಸಾವಿರ ಮೌಲ್ಯದ ಮೀನುಗಾರರಿಗೆ ಉಚಿತ ಸಲಕರಣೆ ಕಿಟ್ ವಿತರಿಸಲಾಗಿದೆ. ಕೃಷಿ ಹೊಂಡಗಳಲ್ಲಿ 250 ಉಚಿತ ಮೀನುಮರಿ ವಿತರಣೆ ಯೋಜನೆಯಡಿ ಒಟ್ಟು 50 ಫಲಾನುಭವಿಗಳು ಆಯ್ಕೆಯಾಗಿದ್ದು, 12,500 ಮೀನುಮರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ಮಾನ್ ಭಾರತ್ ಯೋಜನೆಯಡಿ 3652 ಫಲಾನುಭವಿಗಳಿಗೆ ಎಬಿ-ಎಆರ್‌ಕೆ ಕಾರ್ಡ್ ವಿತರಣೆ ಮಾಡಲಾಯಿತು. 187 ಗರ್ಭಿಣಿ ಮಹಿಳೆಯರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ. 16 ತೀವ್ರ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಜಿಲ್ಲಾ ಪೌಷ್ಟಿಕ ಪುನಶ್ಚೇತನ
ಕೇಂದ್ರದಲ್ಲಿ ದಾಖಲಿಸಿ ಹಾರೈಕೆ ಮಾಡಿರುವುದು ಸೇರಿದಂತೆ ಸರ್ಕಾರದ ವತಿಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.