
ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಂಡಿರುವ 2,15,344 ಖಾತೆಗಳಿವೆ. ಈ ಖಾತೆಗಳಲ್ಲಿ ಬರೋಬರಿ ₹46.79 ಕೋಟಿ ಹಣವಿದೆ. ಹೀಗೆ ದೀರ್ಘ ಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಖಾತೆಗಳು, ಠೇವಣಿ, ವಿಮಾ ಕಂತು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸಲು ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ನಡೆಯುತ್ತಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಅಭಿಯಾನಕ್ಕೆ ಚಾಲನೆ ದೊರೆತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಶೀಘ್ರದಲ್ಲಿಯೇ ಈ ಅಭಿಯಾನಕ್ಕೆ ಚಾಲನೆ ಸಿಗಲಿದೆ.
ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐನಲ್ಲಿಯೇ ಹೆಚ್ಚು ನಿಷ್ಕ್ರಿಯ ಖಾತೆಗಳು ಮತ್ತು ಹಣವಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿವಿಧ ಶಾಖೆಗಳಲ್ಲಿನ 83,727 ನಿಷ್ಕ್ರಿಯ ಖಾತೆಗಳಲ್ಲಿ ₹16.77 ಕೋಟಿ ಮೊತ್ತವಿದೆ. ಪ್ರಮುಖ 10 ಬ್ಯಾಂಕುಗಳ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನಿಷ್ಕ್ರಿಯ ಖಾತೆಗಳು ಇವೆ.
10 ವರ್ಷಗಳಿಗಿಂತ ಹಳೆಯದಾದ ಬ್ಯಾಂಕ್ ಖಾತೆಗಳು ಈಗಾಗಲೇ ನಿಷ್ಕ್ರಿಯಗೊಂಡಿವೆ. ಆರ್‌ಬಿಐ ನಿಯಮದ ಪ್ರಕಾರ ಬ್ಯಾಂಕ್ ಖಾತೆಯಲ್ಲಿ ಉಳಿದಿರುವ ಹಣವು ಆರ್‌ಬಿಐಗೆ ವರ್ಗಾವಣೆಗೊಂಡಿದೆ. ಆಂದೋಲನದಲ್ಲಿ ವಾರಸುದಾರರು ತಮ್ಮ ದಾಖಲಾತಿಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.
‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದ ಭಾಗವಾಗಿ ಮುಂದಿನ ವಾರದಲ್ಲಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿ ಮತ್ತು ಜನರಿಗೆ ಅರಿವು ದೊರೆಯಲಿದೆ.
ಹೀಗೆ ನಿಮ್ಮ ತಂದೆ, ಅಜ್ಜಿ, ತಾತಂದಿರು ಬ್ಯಾಂಕ್ ಖಾತೆಗಳಲ್ಲಿ ಹಣವಿಟ್ಟು ಮರೆತಿದ್ದರೆ ಅಂತಹ ಹಣ ಪಡೆಯಬಹುದು. ಈ ಖಾತೆಗಳಿಗೆ ನಾಮನಿರ್ದೇಶನ ಮಾಡಿದ್ದರೆ ಅಂತಹವರಿಗೆ ಹಣ ದೊರೆಯುತ್ತದೆ. ಇಲ್ಲದಿದ್ದರೆ ವಂಶವೃಕ್ಷ ಮತ್ತು ಪ್ರಮಾಣ ಪತ್ರಗಳನ್ನು ಪಡೆದು ಸಂಬಂಧಿಸಿದ ವಾರಸುದಾರರಿಗೆ ಈ ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ನೀಡಲಾಗುತ್ತದೆ.
ಆನ್‌ಲೈನ್‌ನಲ್ಲಿಯೂ ಪಡೆಯಿರಿ ಮಾಹಿತಿ: ನಿಷ್ಕ್ರಿಯ ಖಾತೆಗಳಲ್ಲಿ ಹಣದ ಮಾಹಿತಿಯನ್ನು http:\\udgarm.rbi.org.in ನಲ್ಲಿಯೂ ಮಾಹಿತಿ ಪಡೆಯಬಹುದು.
ಆದರೆ ರೈತರು ಸೇರಿದಂತೆ ಕೆಲವರು ಈ ವೆಬ್‌ಸೈಟ್ ಬಗ್ಗೆ ಅರಿವು ಹೊಂದಿರುವುದಿಲ್ಲ. ಅಂತಹವರು ಪಾಸ್‌ಬುಕ್, ಬ್ಯಾಂಕಿನ ಖಾತೆ ವಿವರ ಹೀಗೆ ವಿವಿಧ ದಾಖಲೆಗಳನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ನೀಡಬಹುದು.
ಶುಕ್ರವಾರ ಶಿಬಿರ: ಪ್ರತಿ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ ‘ನಮ್ಮ ಹಣ ನಮ್ಮ ಹಕ್ಕು’ ಶಿಬಿರ ನಡೆಯುತ್ತಿದೆ. ಖಾಸಗಿ ಖಾತೆಗಳಷ್ಟೇ ಅಲ್ಲ ಸರ್ಕಾರದ ಖಾತೆಗಳಲ್ಲಿಯೂ ನಿಷ್ಕ್ರಿಯವಾದ ಹಣವನ್ನು ಪಡೆಯಲು ಅವಕಾಶವಿದೆ.
ಯಾವುದೇ ಒಂದು ಸರ್ಕಾರದ ಯೋಜನೆ ಅನುಷ್ಠಾನವಾಗುತ್ತದೆ. ನಂತರ ಆ ಯೋಜನೆಯ ಖಾತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮರೆತಿರುತ್ತಾರೆ. ಆ ಖಾತೆಯನ್ನು ರದ್ದುಗೊಳಿಸಿರುವುದಿಲ್ಲ. ಜಿಲ್ಲೆಯಲ್ಲಿರುವ ಇಂತಹ ಸರ್ಕಾರಿ ಖಾತೆಗಳಲ್ಲಿಯೂ ಹಣವಿದೆ. ಈ ಹಣವನ್ನು ಆಯಾ ಇಲಾಖೆಗಳು ಪಡೆಯಲು ಅವಕಾಶವಿದೆ.
‘ಸ್ವಯಂ ಪ್ರೇರಿತರಾಗಿ ಬನ್ನಿ’
ಎರಡು ವರ್ಷ ಯಾವುದೇ ವಹಿವಾಟು ನಡೆಸದಿದ್ದರೆ ಆ ಖಾತೆಯು ನಿಷ್ಕ್ರಿಯವಾಗುತ್ತದೆ. ಇಂತಹ ಖಾತೆ ಆ ಬ್ಯಾಂಕಿನಲ್ಲಿಯೇ ಇರುತ್ತವೆ. ಆದರೆ 10 ವರ್ಷ ವಹಿವಾಟು ನಡೆಸದಿದ್ದರೆ ಆ ನಿಷ್ಕ್ರಿಯ ಖಾತೆಯನ್ನು ನಾವು ಆರ್‌ಬಿಐಗೆ ಕಳುಹಿಸುತ್ತೇವೆ ಎಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್. ವೆಂಕಟಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಖಾತೆಯಲ್ಲಿ ಎಷ್ಟು ವರ್ಷವಾದರೂ ಆ ಹಣವು ಇರುತ್ತದೆ. ಖಾತೆ ಆರ್‌ಬಿಐ ಬಳಿ ಇರುತ್ತದೆ. ಸರ್ಕಾರವು ಈ ಹಣವನ್ನು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹಣ ದುರುಪಯೋಗ ಆಗುವುದಿಲ್ಲ ಎಂದರು. ಹೀಗೆ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿರುವ ಹಣವನ್ನು ಆ ಖಾತೆಗಳ ನಾಮನಿರ್ದೇಶನ ಸದಸ್ಯರಿಗೆ ಅಥವಾ ವಾರಸುದಾರರಿಗೆ ಮರಳಿಸಲು ‘ನಮ್ಮ ಹಣ ನಮ್ಮ ಹಕ್ಕು’ ಅಭಿಯಾನಕ್ಕೆ ಚಾಲನೆ ದೊರೆತಿದೆ. ಈ ಅಭಿಯಾನದಡಿ ಜನರಿಗೆ ಅರಿವು ಮೂಡಿಸುತ್ತೇವೆ. ನಿಷ್ಕ್ರಿಯ ಖಾತೆಗಳ ಬಗ್ಗೆ ಮಾಹಿತಿಯುಳ್ಳವರು ದಾಖಲೆಗಳ ಜೊತೆ ಬ್ಯಾಂಕಿಗೆ ಬರಬೇಕು. ಜನರು ಸ್ವಯಂ ಪ್ರೇರಿತರಾಗಿ ಹಣ ಪಡೆಯಲು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು. ಕನಿಷ್ಠ ₹100 ₹500ರಿಂದ ಲಕ್ಷಗಳವರೆಗೆ ನಿಷ್ಕ್ರಿಯ ಖಾತೆಗಳಲ್ಲಿ ಹಣವಿದೆ. ಮನೆಯಲ್ಲಿ ಹುಡುಕಿದರೆ ಒಂದಲ್ಲಾ ಒಂದು ದಾಖಲೆ ದೊರೆಯುತ್ತದೆ. ಈ ದಾಖಲೆಗಳ ಮೂಲಕ ಹಣ ಪಡೆಯಲು ಅವಕಾಶವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.