ADVERTISEMENT

ಚಿಕ್ಕಬಳ್ಳಾಪುರ: ಒಟ್ಟಾರೆ 500 ಮಂದಿಗೆ ಕೋವಿಡ್-19, 16 ಮಂದಿ ಸಾವು

ಸಮುದಾಯದಲ್ಲಿ ಹರಡಿದ ಸೋಂಕು, ಆತಂಕದಲ್ಲಿ ಗ್ರಾಮೀಣ ಭಾಗದ ಜನರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:37 IST
Last Updated 15 ಜುಲೈ 2020, 16:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್‌ ರುದ್ರತಾಂಡವ ಮುಂದುವರಿದಿದೆ. ಬುಧವಾರ ಒಂದೇ ದಿನ 32 ಜನರಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕಿನ 68 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಕೋವಿಡ್‌ ಸಮುದಾಯದಲ್ಲಿ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ದಿನೇ ದಿನೇ ಸೋಂಕಿತರ ಸಂಖ್ಯೆ ಏರುಮುಖವಾಗುತ್ತಿದೆ. ಬುಧವಾರದ ಹೊತ್ತಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಬುಧವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ 20, ಬಾಗೇಪಲ್ಲಿ 4, ಚಿಂತಾಮಣಿ 3, ಗೌರಿಬಿದನೂರು ಮತ್ತು ಗುಡಿಬಂಡೆ ತಲಾ 1, ಶಿಡ್ಲಘಟ್ಟ ತಾಲ್ಲೂಕಿನ 3 ಜನರಿಗೆ ಕೋವಿಡ್‌ ತಗುಲಿರುವುದು ಪತ್ತೆಯಾಗಿದೆ.

ADVERTISEMENT

ಈವರೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 175, ಬಾಗೇಪಲ್ಲಿ 78, ಚಿಂತಾಮಣಿ 68, ಗೌರಿಬಿದನೂರು 141, ಶಿಡ್ಲಘಟ್ಟ 31 ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ 7 ಮಂದಿಗೆ ಕೋವಿಡ್ ಸೋಂಕು ತಗುಲಿದೆ.

ಸೋಂಕಿತರ ಪೈಕಿ ಈವರೆಗೆ 16 ಜನರು ಮೃತಪಟ್ಟಿದ್ದಾರೆ. ಚಿಕಿತ್ಸೆಯಿಂದ 279 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್‌ ವಾರ್ಡ್‌ನಲ್ಲಿ 204 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಕ್‌ಡೌನ್ ಕಾರಣಕ್ಕೆ ನಗರ, ಪಟ್ಟಣಗಳ ಜನರು ಗ್ರಾಮೀಣ ಪ್ರದೇಶಗಳಿಗೆ ವಾಪಾಸ್‌ ಆಗುತ್ತಿರುವುದು ಕೂಡ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸುವ ಭೀತಿಗೆ ಕಾರಣವಾಗಿದೆ. ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿ, ಬಗೆಬಗೆ ಕ್ರಮಗಳನ್ನು ಕೈಗೊಂಡರೂ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗದಿರುವುದು ಜನಸಾಮಾನ್ಯರಲ್ಲಿ ಆತಂಕ ತಂದಿದೆ.

ಇತ್ತೀಚಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಏರುಮುಖವಾದ ಸೋಂಕು 500ಕ್ಕೆ ತಲುಪಿರುವುದು, ಸಾವುಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.