ADVERTISEMENT

ವಸತಿನಿಲಯಕ್ಕೆ ಸೌಲಭ್ಯ ಒದಗಿಸಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 8:42 IST
Last Updated 10 ಜನವರಿ 2018, 8:42 IST

ಚಿಂತಾಮಣಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಾಬಾ ನಾಗರಾಜ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸ್ಥಾಯಿ ಸಮಿತಿ ನಡೆದ ಅಧಿಕಾರಿಗಳ ಮಾತನಾಡಿದರು. ವಿದ್ಯಾರ್ಥಿನಿಲಯಗಳಲ್ಲಿ ಇದ್ದು ಓದುತ್ತಿರುವ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಆಹಾರ, ಹಾಲು ಹಾಗೂ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ.

ಶೌಚಾಲಯಗಳ ಸ್ವಚ್ಛತೆ ಕಾಪಾಡುತ್ತಿಲ್ಲ. ವಸತಿ ನಿಲಯದ ಸುತ್ತಲಿನ ವಾತಾವರಣ ಸ್ವಚ್ಛತೆಗೂ ಗಮನ ನೀಡುತ್ತಿಲ್ಲ ಎಂಬುದಾಗಿ ವಿದ್ಯಾರ್ಥಿಗಳೇ ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶೀಲಿಸಿ, ಸರಿಯಾಗಿ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ADVERTISEMENT

ಕೆಲವೆಡೆ ವಿದ್ಯಾರ್ಥಿಗಳು ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರೆ ವಾರ್ಡನ್‌ ಶಿಕ್ಷೆ ನೀಡುತ್ತಾರೆ ಎಂಬ ಭಯ ಕಾಡುತ್ತಿದೆ. ಇನ್ನು ಕೆಲವೆಡೆ ವಿದ್ಯುತ್‌ ಸ್ವಿಚ್‌ ಬೋರ್ಡ್‌ ಕಿತ್ತುಹೋಗಿವೆ. ದೀಪ ಹಾಕುವಾಗ ಸ್ವಿಚ್‌ಗೆ ಕೈ ಹಾಕಿದರೆ ವಿದ್ಯುತ್‌ ಅವಘಡ ಸಂಭವಿಸುವ ಆತಂಕವೂ ಕಾಡುತ್ತಿದೆ. ಅನಾಹುತ ಸಂಭವಿಸಿದರೆ ಯಾರನ್ನು ಹೊಣೆ ಮಾಡುವುದು ಎಂದು ಪ್ರಶ್ನಿಸಿದರು.

ಇಲಾಖೆಗಳ ಹಿರಿಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಿಗೆ ಆಗಾಗ್ಗೆ ಭೇಟಿ ನೀಡಿ ಮೇಲ್ವಿಚಾರಕರಿಗೆ ಸೂಚನೆ ನೀಡಬೇಕು. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ, ಕಡದಲಮರಿ, ಕೆ.ರಾಗುಟ್ಟಹಳ್ಳಿಯ ವಿದ್ಯಾರ್ಥಿನಿಲಯಗಳ ಕಟ್ಟಡಗಳಿಗೆ ಅನುದಾನ ಬಂದಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಾಮಗಾರಿ ಕಳಪೆಯಾಗಬಾರದು ಎಂದರು.

ಪಶುಭಾಗ್ಯ ಯೋಜನೆಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಿ. ಅಧಿಕಾರಿಗಳು ಮಾನವೀಯತೆಯಿಂದ ಸಾರ್ವಜನಿಕರ ಜೊತೆಗೆ ವರ್ತಿಸಿ, ಕಾನೂನುಬದ್ಧವಾಗಿದ್ದಲ್ಲಿ ಅವರ ಕೆಲಸ ಮಾಡಿಕೊಡಬೇಕು. ಯಾವುದೇ ರೀತಿ ದೂರು ಬಾರದಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸ್ಥಾಯಿ ಸಮಿತಿ ಸದಸ್ಯರಾದ ಮಾನಸ ಶಿವಾನಂದ, ಲಕ್ಷ್ಮೀ ಸೋಮಶೇಖರ್‌, ಕೆ.ಎನ್‌. ಉಷಾರಾಣಿ, ನರಸಿಂಹಪ್ಪ, ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.