ADVERTISEMENT

ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನಲ್ಲಿ 5,890 ಜನರಿಗೆ ನಾಯಿ ಕಡಿತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:14 IST
Last Updated 10 ಜುಲೈ 2025, 18:14 IST
ಹಾವು ಮತ್ತು ನಾಯಿ ಕಡಿತಕ್ಕೆ ಸಂಬಂಧಿಸಿದ ಜಾಗೃತಿ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆ ಮಾಡಿದರು 
ಹಾವು ಮತ್ತು ನಾಯಿ ಕಡಿತಕ್ಕೆ ಸಂಬಂಧಿಸಿದ ಜಾಗೃತಿ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆ ಮಾಡಿದರು    

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ  2025ನೇ ಸಾಲಿನಲ್ಲಿ 5,890 ಜನರಿಗೆ ನಾಯಿ ಮತ್ತು 404 ಜನರಿಗೆ ಹಾವು ಕಡಿತದ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಝೋನೋಸಿಸ್ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಯಿ ಕಡಿತಕ್ಕೆ ಒಳಾಗಿದ್ದ 46 ವರ್ಷದ ಮಹಿಳೆ ರಬಿಸ್ ಸೋಂಕಿನಿಂದ ನಿಧನರಾಗಿದ್ದಾರೆ. ಹಾವು ಕಡಿತದಿಂದ ಇಬ್ಬರು ನಿಧಾನರಾಗಿದ್ದಾರೆ ಎಂದರು.

ADVERTISEMENT

ನಾಯಿ ಕಚ್ಚುವಿಕೆಯು ರೇಬಿಸ್‌ ಸೋಂಕು ಹರಡಬಹುದು. ಇದು ಮಾರಣಾಂತಿಕ ಕಾಯಿಲೆ. ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅತ್ಯಗತ್ಯ.‌ ವಿಶೇಷವಾಗಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಸಾರ್ವಜನಿಕರಿಗೆ  ಮನವಿ ಮಾಡಿದರು.

ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಆಗಿರುತ್ತವೆ. ಹಾವು ಕಚ್ಚಿದ ಸಂದರ್ಭಗಳಲ್ಲಿ ಹೆದರಬಾರದು. ಹಾವು ಕಚ್ಚಿದ ಸಂದರ್ಭಗಳಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಡ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ  ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದರು.

ಈ ಸೋಂಕಿನ ಬಗ್ಗೆ ಶಾಲಾ, ಕಾಲೇಜು, ಗ್ರಾಮ ಪಂಚಾಯತಿ, ನಗರಸಭೆ ವ್ಯಾಪ್ತಿಯಲ್ಲಿ  ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ನಾಯಿ ಮತ್ತು ಹಾವು ಕಡಿತ ಕಡಿಮೆ ಮಾಡಲು ಕ್ರಮ ವಹಿಸಿ ಅರಿವು  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು  ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜನಸಂಖ್ಯೆ ನಿಯಂತ್ರಿಸಲು ಮೂಢನಂಬಿಕೆ‌ಗಳನ್ನು ಹೋಗಲಾಡಿಸಬೇಕು. ಮದುವೆಯಾದ ನಂತರ ಕನಿಷ್ಠ 2 ವರ್ಷಗಳವರೆಗೆ ಮೊದಲನೇ ಮಗುವನ್ನು ಪಡೆಯಬಾರದು. ಜನನಗಳ ನಡುವೆ ಕನಿಷ್ಠ 3 ವರ್ಷಗಳ ಅಂತರವಿರಲು ದಂಪತಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಸರಿಸಬೇಕು ಎಂದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎನ್.ಎನ್ ಮಹೇಶ್ ಕುಮಾರ್, ಡಾ.ಚಂದ್ರಶೇಖರ್ ರೆಡ್ಡಿ, ಡಾ.ಜಿ.ವಿ ಸಂತೋಷ್ ಬಾಬು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಎಚ್. ಎನ್ ರಂಗಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.